ಆಹಾರ ಇಲಾಖೆ ಅಧಿಕಾರಿಗಳ ದಾಳಿ; 600 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ವಶ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಸರಕಾರ ಬಡವರಿಗೆ ಹಂಚಿಕೆ ಮಾಡಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಶೆಡ್ ಒಂದರ ಮೇಲೆ ಅಹಾರ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ರವಿಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ‌ ಮಾಡಿದ್ದು, ಅಪಾರ ಪ್ರಮಾಣದ ಅಕ್ಕಿ ವಶಪಡಿಸಿಕೊಂಡಿದೆ.

ಜಿಲ್ಲೆಯ ಗಜೇಂದ್ರಗಡದ ಗುಡ್ಡದ ಹಿಂಭಾಗದಲ್ಲಿ ಇರುವ ಜಮೀನೊಂದರ ಶೆಡ್‌ನಲ್ಲಿ ಅಕ್ರಮವಾಗಿ ಅಕ್ಕಿ ಸಂಗ್ರಹಿಸಿದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.ರಾಜೂರ ಗ್ರಾ.ಪಂ. ವ್ಯಾಪ್ತಿಗೆ ಬರುವ ಈ ಜಮೀನಿನಲ್ಲಿ ಇರುವ ಶೆಡ್ ಬಾಡಿಗೆ ರೂಪದಲ್ಲಿ ಪಡೆಯಲಾಗಿತ್ತು.

ಶುಕ್ರವಾರ ಬೆಳಗ್ಗೆ ಆಹಾರ ಇಲಾಖೆಯ ಉಪ ನಿರ್ದೇಶಕ ರವಿಕುಮಾರ್, ಗಜೇಂದ್ರಗಡ ತಹಸೀಲ್ದಾರ ಅಶೋಕ ಕಲಘಟಗಿ, ಆಹಾರ‌ ನಿರೀಕ್ಷಕ ಮಂಜುನಾಥ್ ತಳ್ಳಿಹಾಳ, ಪಿಎಸ್ಐ ಗುರುಶಾಂತ ದಾಸ್ಯಾಳ ಕಾರ್ಯಚರಣೆಯಲ್ಲಿದ್ದರು. ದಾಳಿಯ ಕಾಲಕ್ಕೆ 600 ಕ್ವಿಂಟಲ್ ಅಕ್ಕಿ ಜಪ್ತಿಯಾಗಿದ್ದು, ಇದರ ರೂವಾರಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಶಾಸಕರ ಬಲಗೈ ಬಂಟ ಶಾಮೀಲು?

ಗಜೇಂದ್ರಗಡದಲ್ಲಿ ಈ ಹಿಂದೆಯೂ ಅನ್ನಭಾಗ್ಯದ ಅಕ್ಕಿ ಸಿಕ್ಕಿತ್ತು. ಆಗ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದ್ದರು. ಅನ್ನಭಾಗ್ಯ ಅಕ್ಕಿ ದಂಧೆಯಲ್ಲಿ ಶಾಸಕರ ಹಿಂಬಾಲಕರೇ ಇದ್ದಾರೆ. ನಿಷ್ಪಕ್ಷಪಾತ ತನಿಖೆ ನಡೆಸಿ ಎಂದು ಒತ್ತಾಯಿಸಿದ್ದರು. ಆದರೆ, ಸರಕಾರ, ಅಧಿಕಾರಿಗಳು ಪ್ರಕರಣವನ್ನು ಯಾವ ರೀತಿ ತನಿಖೆ ನಡೆಸಿದರು ಅಂತ ಬಹಿರಂಗವಾಗಲೇ ಇಲ್ಲ.

ಗಜೇಂದ್ರಗಡದಲ್ಲಿ ಕಾಳು-ಕಡಿ ತುಂಬುವ ಅಳಿಯ- ಮಾವನೇ ಅಕ್ಕಿಯ ಅಕ್ರಮ ಸಂಗ್ರಹ ಮಾಡುವ ಕಸುಬುದಾರರು. ಮೂಲಗಳ ಪ್ರಕಾರ ಶಾಸಕರ ಬಲಗೈ ಬಂಟನೇ ಈ ದಂಧೆಯೆ ರೂವಾರಿ ಎಂದು ಹೇಳಲಾಗುತ್ತಿದ್ದು, ಈ ಹಿಂದೆ ಕಾಂಗ್ರೆಸ್ ಮುಖಂಡರು ದಂಧೆ ಬಯಲಿಗೆ ತಂದ ಮೇಲೆ ಮೂರು ತಿಂಗಳು ಬಂದ್ ಆಗಿತ್ತು. ಆನಂತರ ಈ ಹೊಸ ಜಾಗೆ ಪಡೆದು ಮತ್ತೆ ದಂಧೆ ಆರಂಭಿಸಿದ್ದರು. ದಂಧೆ ನಡೆಸುವ ಮೊದಲೇ ಅಧಿಕಾರಿಗಳನ್ನು ಬುಕ್ ಮಾಡಿಕೊಳ್ಳುತ್ತಾರೆ ಎಂಬ ಆರೋಪ ಸಾರ್ವಜನಿಕರದು. ಈ ಆರೋಪಕ್ಕೆ ಪುಷ್ಟಿ ಶುಕ್ರವಾರದ ಕಾರ್ಯಚರಣೆ.

ಗದಗನ ಅಧಿಕಾರಿಗಳು ಬಂದು ದಾಳಿ ಮಾಡುವುದಾದರೆ ಸ್ಥಳೀಯ ಆಹಾರ ಇಲಾಖೆಯ ಅಧಿಕಾರಿಗಳಿಗೆ ಈ ವಿಷಯ ಗೊತ್ತಿರಲಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.
ಆಹಾರ ಇಲಾಖೆ ಅಧಿಕಾರಿಗಳಿಗೆ ಖಚಿತ ಮಾಹಿತಿಯನ್ನು ಕೊಟ್ಟವರು ಯಾರು ಎನ್ನುವ ಪ್ರಶ್ನೆ ಮೂಡಿದೆ. ಗದಗನ ಕಾಂಗ್ರೆಸ್ ‌ಮುಖಂಡ, ಅಕ್ಕಿ ದಂಧೆಕೋರನೇ ರೇಡ್ ಮಾಡಿಸಿರಬಹುದು ಎಂಬ ಸುದ್ದಿಯೂ ಹರಡಿದೆ. ಸಿಕ್ಕ ಅಕ್ಕಿ, ಇದರಲ್ಲಿ ಪಾಲ್ಗೊಂಡ ದಂಧೆಕೋರರ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಜನರ ಮುಂದೆ ಸತ್ಯಾಂಶ ಬಿಚ್ಚಿಡುವ ಹೊಣೆಗಾರಿಕೆ ಜಿಲ್ಲಾಡಳಿತಕ್ಕಿದೆ.


Spread the love

LEAVE A REPLY

Please enter your comment!
Please enter your name here