ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು: ಗೌರಿ ಹತ್ಯೆ ಕೇಸಿನಲ್ಲಿ ಆರೋಪಿಯಾಗಿರುವ ಗಣೇಶ್ ಮಿಸ್ಕಿನ್ ಸಂಬಂಧಿಗಳಿಬ್ಬರ ನಡುವಿನ 190 ಸೆಕೆಂಡ್‌ಗಳ ಫೋನ್ ಸಂಭಾಷಣೆಯು, ಗೌರಿ ಹತ್ಯೆ ಆರೋಪಿಗಳಲ್ಲಿ ಕೆಲವರು ಕಲಬುರ್ಗಿ ಹತ್ಯೆಯಲ್ಲೂ ಭಾಗಿ ಎಂಬ ಲಿಂಕ್ ಕೂಡಿಸಲು ನೆರವಾಗಿತು!
ಕೋರ್ಟ್ ಗೆ ಸಲ್ಲಿಸಿರುವ ದಾಖಲೆ ಆಧಾರದಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಇದನ್ನು ವರದಿ ಮಾಡಿದೆ.
ಗೌರಿ ಹತ್ಯೆ ಆರೋಪದಲ್ಲಿ 2018ರ ಜುಲೈನಲ್ಲಿ ಹುಬ್ಬಳ್ಳಿಯ ಗಣೇಶ್ ಮಿಸ್ಕಿನ ಬಂಧನದ ನಂತರ ಈ ಫೋನ್ ಸಂಭಾಷಣೆ ನಡೆದಿದೆ.
ಜುಲೈ 22, 2018ರಂದು ಗಣೇಶ್ ಸಂಬಂಧಿ ರವಿ ಮಿಸ್ಕಿನ್ ಮತ್ತು ಆತನ ‘ಅಂಕಲ್’ ನಡುವೆ ನಡೆಯುವ ಫೋನ್ ಸಂಭಾಷನೆಯಲ್ಲಿ, ರವಿ ಮಿಸ್ಕಿನ, ’ಅಂಕಲ್, ಗಣೇಶ್ ಈಗ ಎರಡು ಕೊಲೆ ಕೇಸಿನಲ್ಲಿ ಭಾಗಿಯಾದಂತಾಗಿದೆ’ ಎಂಬರ್ಥದ ಮಾತು ಹೇಳುತ್ತಾನೆ.
ಆಗಲೇ ಎರಡೂ ಹತ್ಯೆಗೆ ಬಳಸಿದ ಪಿಸ್ತೂಲ್ ಒಂದೇ ಎಂದು ಸಾಧಿಸಿದ್ದ ಎಸ್‌ಐಟಿ ಈ ಫೋನ್ ಸಂಭಾಷಣೆ ಎಳೆ ಹಿಡಿದು ಇನ್ನಷ್ಟು ತನಿಖೆ ಮಾಡಿತ್ತು ಮತ್ತು ಆರೋಪಿಗಳನ್ನು ತೀವ್ರವಾಗಿ ವಿಚಾರಣೆ ಮಾಡಿತ್ತು. ಈಗ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ ಪ್ರಕಾರ, ಕಲಬುರ್ಗಿ ಅವರನ್ನು ಶೂಟ್ ಮಾಡಿದ್ದು ಗಣೇಶ್ ಮಿಸ್ಕಿನ್, ಆಗ ಬೈಕ್ ಚಲಾಯಿಸಿದ್ದು ಬೆಳಗಾವಿಯ ಪ್ರವೀಣ್ ಪ್ರಕಾಶ ಚಾಟೂರ್.
ಗೌರಿ ಹತ್ಯೆ ಸಂದರ್ಭದಲ್ಲಿ ಗಣೇಶ್ ಮಿಸ್ಕಿನ್ ಬೈಕ್ ಓಡಿಸಿದರೆ, ಸಿಂದಗಿಯ ಪರಶುರಾಮ್ ಶೂಟ್ ಮಾಡಿದ್ದ.
ಸದ್ಯ ಕೊವಿಡ್ ಕಾರಣದಿಂದ ಇವೆರಡೂ ಹತ್ಯೆಗಳ ವಿಚಾರಣೆ ಆರಂಭವಾಗಿಲ್ಲ. ಈ ನಡುವೆ ಪ್ರಮುಖ ಆರೋಪಿ ಅಮೋಲ್ ಕಾಳೆ ಕೋರ್ಟಿಗೆ ಅರ್ಜಿ ಸಲ್ಲಿಸಿ, ‘ಜೈಲಿನಲ್ಲಿ ಈಗ ಕೈದಿಗಳ ಸಂಖ್ಯೆ ಹೆಚ್ಚಿದೆ. ಕೊವಿಡ್ ಸಾಂಕ್ರಾಮಿಕ ಹರಡುವ ಆತಂಕವಿದೆ. ಹೀಗಾಗಿ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು’ ಎಂದು ಕೇಳಿದ್ದಾನೆ. ಕೋರ್ಟ್ ಜೈಲಲ್ಲಿರುವ ಕೈದಿಗಳ ಸಂಖ್ಯೆ, ಸೆಲ್‌ಗಳ ವಿವರ ಸಲ್ಲಿಸಲು ಪೊಲೀಸರಿಗೆ ಸೂಚಿಸಿದೆ.