ವಿಜಯಸಾಕ್ಷಿ ಸುದ್ದಿ, ಲಂಡನ್
ಭಾರತೀಯ ಮಹಿಳೆಯರ ಕ್ರಿಕೆಟ್ ತಂಡ ಹಾಗೂ ಇಂಗ್ಲೆಂಡ್ ಮಹಿಳಾ ತಂಡ ಟೆಸ್ಟ್ ಪಂದ್ಯದಲ್ಲಿ ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ 17ರ ವಯಸ್ಸಿನ ಭಾರತೀಯ ಮಹಿಳಾ ಸ್ಫೋಟಕ ಆಟಗಾರ್ತಿ ಶಫಾಲಿ ವರ್ಮ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ.
ಶಫಾಲಿ, ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಆಟ ಪ್ರದರ್ಶಿಸಿ ಕೇವಲ 4 ರನ್ ಗಳಿಂದ ಶತಕ ವಂಚಿತರಾಗಿದ್ದಾರೆ. ಎರಡನೇ ಇನ್ನಿಂಗ್ಸ್ ನಲ್ಲಿಯೂ ಶಫಾಲಿ ವರ್ಮ ತಮ್ಮ ಶ್ರೇಷ್ಠ ಆಟ ಮುಂದುವರಿಸಿದ್ದಾರೆ. ಚೊಚ್ಚಲ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿಯೂ ಶಫಾಲಿ ಅರ್ಧ ಶತಕ ಸಿಡಿಸಿದ್ದಾರೆ. ಈ ಮೂಲಕ ಭಾರತೀಯ ತಂಡದ ಪರವಾಗಿ ಮತ್ತೊಂದು ಸುಂದರ ಇನ್ನಿಂಗ್ಸ್ ಕಟ್ಟುವಲ್ಲಿ ಮುಂದಾಗಿದ್ದಾರೆ.
ಮೊದಲ ಇನ್ನಿಂಗ್ಸ್ ನಲ್ಲಿ ಶಫಾಲಿ ಆರಂಭಿಕ ಜೊತೆಗಾರ್ತಿ ಸ್ಮೃತಿ ಮಂದಣ್ಣ ಜೊತೆಗೆ 167 ರನ್ ಗಳ ಬೃಹತ್ ಜೊತೆಯಾಟ ನೀಡಿದ್ದಾರೆ. ಈ ಸಂದರ್ಭದಲ್ಲಿ 152 ಎಸೆತಗಳನ್ನು ಎದುರಿಸಿದ್ದ ಶಫಾಲಿ 13 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದರು. ಈ ಮೂಲಕ ಶಫಾಲಿ ವರ್ಮಾ ಚೊಚ್ಚಲ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಶಿಖರ್ ಧವನ್ ಮೊದಲ ಸ್ಥಾನದಲ್ಲಿದ್ದು ತಮ್ಮ ಚೊಚ್ಚಲ ಪಂದ್ಯದಲ್ಲಿ ಒಟ್ಟು 187 ರನ್ ಗಳಿಸಿದ್ದರು. ಎರಡನೇ ಸ್ಥಾನದಲ್ಲಿ ರೋಹಿತ್ ಶರ್ಮಾ(177 ರನ್) ಹಾಗೂ ಮೂರನೇ ಸ್ಥಾನದಲ್ಲಿ 156 ರನ್ ಗಳಿಸಿದ (38 ಹಾಗೂ 118) ಲಾಲಾ ಅಮರನಾಥ್ ಇದ್ದಾರೆ.
ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 396 ರನ್ ಗಳನ್ನು ಕಲೆ ಹಾಕಿತ್ತು. ಆ ನಂತರ ಮೊದಲ ಇನ್ನಿಂಗ್ಸ್ ಪ್ರಾರಂಭಿಸಿದ ಭಾರತ ತಂಡ ಶಫಾಲಿ ಹಾಗೂ ಸ್ಮೃತಿ ಜೋಡಿ ನೀಡಿದ ಶ್ರೇಷ್ಠ ಜೊತೆಯಾಟದಿಂದ ಉತ್ತಮ ಆರಂಭ ಪಡೆದಿತ್ತು. ಆದರೆ, ಆ ನಂತರ ಈ ಜೋಡಿ ಬೇರ್ಪಡುತ್ತಿದ್ದಂತೆ ಹಠಾತ್ ಕುಸಿತ ಕಂಡಿತು.
ಮಿಥಾಲಿ ರಾಜ್, ಪೂನಮ್ ರಾವತ್ ಹಾಗೂ ಶಿಖಾ ಪಾಂಡೆ ಶೀಘ್ರವಾಗಿ ವಿಕೆಟ್ ಕಳೆದುಕೊಂಡು ಫೆವಿಲಿಯನ್ ಸೇರಿದರು. ಎರಡನೇ ದಿನದಂತ್ಯಕ್ಕೆ ಭಾರತ 187 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿತ್ತು. ಮೂರನೇ ದಿನವೂ ಈ ಕುಸಿತ ಕಂಡು 231 ರನ್ ಗಳಿಗೆ ಆಲೌಟ್ ಆಯಿತು. 165 ರನ್ ಗಳ ಮುನ್ನಡೆ ಪಡೆದ ಇಂಗ್ಲೆಂಡ್ ಭಾರತ ತಂಡಕ್ಕೆ ಫಾಲೋ ಆನ್ ಹೇರಿತು. ಹೀಗಾಗಿ ಭಾರತ ಮತ್ತೆ ಬ್ಯಾಟಿಂಗ್‌ಗೆ ಇಳಿದಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಉತ್ತಮ ಜೊತೆಯಾಟಕ್ಕೆ ಸಾಕ್ಷಿಯಾಗಿದ್ದ ಸ್ಮೃತಿ ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 8 ರನ್ ಗಳಿಗೆ ಔಟ್ ಆದರು. ನಂತರ ಬಂದ ದೀಪ್ತಿ ಶರ್ಮಾ ಜೊತೆಗೆ ಶಫಾಲಿ ತಮ್ಮ ಆಟವನ್ನು ಮುಂದುವರಿಸಿದ್ದಾರೆ. ಮಳೆಯಿಂದಾಗಿ ಮೂರನೇ ದಿನದಾಟ ಸ್ಥಗಿತವಾಗಿದ್ದು ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ 83 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡು 82 ರನ್ ಗಳ ಹಿನ್ನೆಡೆ ಅನುಭವಿಸಿದೆ. ಶಫಾಲಿ 55 ರನ್ ಗಳಿಸಿದ್ದರೆ ದೀಪ್ತಿ ಶರ್ಮಾ 18 ರನ್ ಗಳಿಸಿ ಆಡುತ್ತಿದ್ದಾರೆ.