ವಿಜಯಸಾಕ್ಷಿ ಸುದ್ದಿ, ಲಂಡನ್
ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ನಡೆದ ಟೆಸ್ಟ್ ಸರಣಿಯನ್ನು ನ್ಯೂಜಿಲೆಂಡ್ ತಂಡ ಗೆದ್ದು ಬೀಗಿದೆ. ಅಲ್ಲದೇ, ಭಾರತದೊಂದಿಗೆ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಆತ್ಮವಿಶ್ವಾಸ ಬೆಳೆಸಿಕೊಂಡಿದೆ.
ಲಂಡನ್ ನಲ್ಲಿ ನಡೆದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತ್ತು. ಆದರೆ, ಎರಡನೇ ಟೆಸ್ಟ್ ಪಂದ್ಯವನ್ನು ನ್ಯೂಜಿಲೆಂಡ್ ತಂಡ ಗೆದ್ದುಕೊಂಡಿದೆ. ಈ ಮೂಲಕ 1-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿತು.
ಎರಡನೇ ಟೆಸ್ಟ್ ನ ಮೊದಲನೇ ಇನ್ನಿಂಗ್ಸ್ ನಲ್ಲಿ ರಾಯ್ ಬರ್ನ್ಸ್ 81, ಲಾರೆನ್ಸ್ ಅಜೇಯ 81 ಹಾಗೂ ಮಾರ್ಕ್ ವುಡ್ 41 ರನ್ ಗಳಿಂದಾಗಿ ಇಂಗ್ಲೆಂಡ್ ತಂಡ ಎಲ್ಲ ವಿಕೆಟ್ ಗಳನ್ನು 303 ರನ್ ಗಳನ್ನು ಗಳಿಸಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ ತಂಡದ ಟ್ರೆಂಟ್ ಬೌಲ್ಟ್ 4, ಮ್ಯಾಟ್ ಹೆನ್ರಿ 3 ಹಾಗೂ ಅಜಜ಼್ ಪಟೇಲ್ 2 ವಿಕೆಟ್ ಪಡೆದು ಮಿಂಚಿದ್ದರು. ಆನಂತರ ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮುಂದುವರೆಸಿದ್ದ ನ್ಯೂಜಿಲೆಂಡ್ 388 ರನ್ ಗಳಿಗೆ ಆಲ್ ಔಟ್ ಆಯಿತು. ಈ ಮೂಲಕ ನ್ಯೂಜಿಲೆಂಡ್ ಗೆ 85 ರನ್ ಗಳ ಲೀಡ್ ಸಿಕ್ಕಿತ್ತು. ಇಂಗ್ಲೆಂಡ್ ತಂಡದ ಪರ ಸ್ಟುವರ್ಟ್ ಬ್ರಾಡ್ 4, ಮಾರ್ಕ್ ವುಡ್ 2 ಹಾಗೂ ಓಲಿ ಸ್ಟೋನ್ 2 ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ಬೌಲರ್ ಗಳ ಎದುರು ತತ್ತರಿಸಿ ಹೋದರು. ಕೇವಲ 122 ರನ್ ಗಳಿಗೆ ಇಂಗ್ಲೆಂಡ್ ಸರ್ವ ಪತನ ಕಂಡಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 2 ವಿಕೆಟ್ ಕಳೆದುಕೊಂಡು 41 ರನ್ ಗಳಿಸುವುದರ ಮೂಲಕ 8 ವಿಕೆಟ್ ಗಳ ಜಯ ಸಾಧಿಸಿತು.
ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಮ್ಯಾಟ್ ಹೆನ್ರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ನ್ಯೂಜಿಲೆಂಡ್ ತಂಡದ ಯುವ ಆಟಗಾರ ಡಿವೋನ್ ಕಾನ್ವೆ ಹಾಗೂ ಇಂಗ್ಲೆಂಡ್ ತಂಡದ ರಾಯ್ ಬರ್ನ್ಸ್ ಇಬ್ಬರೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಈ ಗೆಲುವಿನ ಮೂಲಕ ನ್ಯೂಜಿಲೆಂಡ್ ತಂಡ ಆತ್ಮವಿಶ್ವಾಸದಲ್ಲಿಯೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಭಾರತವನ್ನು ಎದುರಿಸಲಿದೆ.