ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದಲ್ಲಿ ಸಚಿವ ಸ್ಥಾನ ಸಿಗದ ಅತೃಪ್ತಗೊಂಡಿರುವ ಸುಮಾರು ಹತ್ತಕ್ಕೂ ಹೆಚ್ಚು ಶಾಸಕರು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಬೆಂಗಳೂರಿನ ನಿವಾಸದಲ್ಲಿ ಇಂದು ರಾತ್ರಿ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಿದ್ದರು. ಪ್ರಕರಣ ಅಂತ್ಯಗೊಳಿಸಿ ಶೀಘ್ರ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಒತ್ತಡ ಹೇರಿದ್ದರು. ಒಂದು ಹಂತದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನೂ ಪ್ರಕಟಿಸಿದ್ದರು. ಆದರೆ, ಬಿಜೆಪಿಯ ಮುಖಂಡರು ಮನವೊಲಿಸಿದ್ದರಿಂದ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದರು.
ಪ್ರಕರಣ ಇತ್ಯರ್ಥವಾಗುವವರೆಗೆ ತಮ್ಮ ಬದಲು ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಸಚಿವಸ್ಥಾನ ನೀಡುವಂತೆ ಕೋರಿದ್ದರು ಎನ್ನಲಾಗಿದೆ. ಆದರೆ ಬಾಲಚಂದ್ರ ಜಾರಕಿಹೊಳಿಗೆ ಮಂತ್ರಿಸ್ಥಾನ ಸಿಕ್ಕಿಲ್ಲ. ಅಲ್ಲದೆ ಇವರೊಂದಿಗೆ ಬಿಜೆಪಿಗೆ ಬಂದ ಆರ್.ಶಂಕರ, ಮಹೇಶ ಕುಮಟಳ್ಳಿ ಅವರನ್ನೂ ಕೈಬಿಡಲಾಗಿದೆ. ಜತೆಗೆ ಹಾವೇರಿ ಶಾಸಕ ನೆಹರೂ ಒಲೇಕಾರ, ಸವದತ್ತಿ ಶಾಸಕ ಆನಂದ ಮಾಮನಿ ಸೇರಿ ಹಲವು ಸಚಿವಾಕಾಂಕ್ಷಿಗಳನ್ನು ಕಡೆಗಣಿಸಿದ್ದು, ಅವರೂ ಅಸಮಾಧಾನಗೊಂಡಿದ್ದಾರೆ.
ಅತೃಪ್ತರೆಲ್ಲ ಇಂದು ರಾತ್ರಿ ಸಭೆ ನಡೆಸಲು ಮುಂದಾಗಿದ್ದಾರೆ. ಆದರೆ ವಲಸೆ ಬಂದವರಷ್ಟೆ ಸಭೆ ನಡೆಸುತ್ತಾರೋ, ಮೂಲ ಬಿಜೆಪಿಗರೂ ಇದರಲ್ಲಿ ಭಾಗಿಯಾಗಲಿದ್ದಾರೋ ಎನ್ನುವುದು ಇನ್ನೂ ಖಚಿತವಾಗಿಲ್ಲ.