- ವರಿಷ್ಠರಿಂದ ಬರುವ ಸಂದೇಶ ಪಾಲಿಸುವೆ
- ಬೆಳಗಾವಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ
ವಿಜಯಸಾಕ್ಷಿ ಸುದ್ದಿ, ಬೆಳಗಾವಿ
ಪದತ್ಯಾಗ ಕುರಿತಂತೆ ಇಂದು ಸಂಜೆಯೊಳಗೆ ಹೈಕಮಾಂಡ್ ನಿಂದ ಸಂದೇಶ ಬರಲಿದ್ದು, ಅದರಂತೆ ನಡೆಯುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳು ನನ್ನ ಪರವಾಗಿ ಯಾವುದೇ ಸಭೆ ನಡೆಸುವ, ಹೇಳಿಕೆ ನೀಡುವುದು ಬೇಡ. ನಮ್ಮ ಪಕ್ಷ ವರಿಷ್ಠರಾದ ಅಮಿತ್ ಶಾ, ಜೆಪಿ ನಡ್ಡಾ ಅವರ ಮೇಲೆ ನನಗೆ ಸಂಪೂರ್ಣ ವಿಶ್ವಾಸ ಇದೆ. ಅವರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದರು.
ಮೊಟ್ಟೆ ಟೆಂಡರ್ ನಲ್ಲಿ ಕಿಕ್ ಬ್ಯಾಕ್ ಕೇಳಿರುವ
ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಕ್ರಮ ಜರುಗಿಸುವಿರಾ ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮಾಧ್ಯಮಗಳಲ್ಲಿ ನೋಡಿದ್ದೇನೆ. ಇದರ ಸತ್ಯಾಸತ್ಯತೆ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಳೆದ ಎರಡ್ಮೂರು ದಿನಗಳಿಂದ ಜಿಲ್ಲೆಯಲ್ಲಿ ಉದ್ಭವಿಸಿದ ಪ್ರವಾಹ ಪರಿಸ್ಥಿತಿ ಅವಲೋಕಿಸಲು ಜಿಲ್ಲೆಗೆ ಬಂದಿದ್ದೇನೆ. ನೆರೆಯಿಂದ ನೆಲೆ ಕಳೆದುಕೊಂಡು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿರುವ ಜನರನ್ನು ಭೇಟಿಯಾಗಿ ಸಮಸ್ಯೆ ಆಲಿಸುವೆ. ಅದೃಷ್ಟವಶಾತ್ ನಿನ್ನೆಯಿಂದ ಮಳೆ ಬಿಡುವು ನೀಡಿದೆ. ಮಹಾರಾಷ್ಟ್ರ ಭಾಗದಲ್ಲೂ ಮಳೆ ಕಡಿಮೆಯಾಗಿದೆ. ಹಾಗಾಗಿ ನದಿಗಳ ನೀರಿನ ಮಟ್ಟ ಕಡಿಮೆಯಾಗಿದ್ದು, ಜನರು ಸಂಕಷ್ಟದಿಂದ ಹೊರಬರಲಿದ್ದಾರೆ ಎಂದವರು ತಿಳಿಸಿದರು.