ವಿಜಯಸಾಕ್ಷಿ ಸುದ್ದಿ, ಗದಗ:
ಸರ್ಕಾರವು ಹೊಸದಾಗಿ ಜಾರಿಗೆ ತಂದಿರುವ ಇಆರ್‌ಎಸ್‌ಎಸ್-112 ಯೋಜನೆಯಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಗಳ ಬಗ್ಗೆ ಜಿಲ್ಲೆಯ ಸಾರ್ವಜನಿಕರಲ್ಲಿ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.
ಜೂನ್.19ರಂದು ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಮಹಿಳೆಯೊಬ್ಬಳು ಕೌಟುಂಬಿಕ ಕಲಹದಿಂದ ಮನನೊಂದು ಆತ್ಮಹತ್ಯೆಯ ನಿರ್ಧಾರ ತಳೆದು ನಗರದ ಹೊರವಲಯದ ಕೆರೆಯ ಬಳಿ ಹೋಗುತ್ತಿದ್ದಾಗ ಇಆರ್‌ಎಸ್‌ಎಸ್ ಕರ್ತವ್ಯದ ಮೇಲಿದ್ದ ಸಿಬ್ಬಂದಿಗಳು ಆ ಮಹಿಳೆಯನ್ನು ತಡೆದು, ವಿಚಾರಣೆ ನಡೆಸಿ ಧೈರ್ಯ ತುಂಬುವ ಸಾಂತ್ವನದ ಮಾತುಗಳನ್ನಾಡಿ, ಮನಃಪರಿವರ್ತನೆ ಮಾಡಿದ್ದಾರೆ ಮತ್ತು ಕ್ಷುಲ್ಲಕ ಕಾರಣಗಳಿಗೆ ಜೀವ ಕಳೆದುಕೊಳ್ಳುವ ನಿರ್ಧಾರ ತಾಳಬಾರದೆಂದು ಆತ್ಮವಿಶ್ವಾಸ ಮೂಡಿಸಿದ್ದರು.

ಇದೇ ರೀತಿ ತಾಲೂಕಿನ ಕಣಗಿಹಾಳ ಗ್ರಾಮದ ಹತ್ತಿರವಿರುವ ರೈಲ್ವೇ ಟ್ರಾಕ್ ಬಳಿ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವದಕ್ಕಾಗಿ ಟ್ರಾಕ್‌ನ ಹತ್ತಿರ ಹೋಗುತ್ತಿದ್ದಾಗಲೂ ಇಆರ್‌ಎಸ್‌ಎಸ್ ಸಿಬ್ಬಂದಿಗಳು ಆ ಮಹಿಳೆಗೆ ಬುದ್ಧಿವಾದ ಹೇಳಿ ಸುರಕ್ಷಿತವಾಗಿ ತನ್ನ ಮನೆ ತಲುಪುವಂತೆ ಮಾಡಿದ್ದರು.
ಜುಲೈ.6, ಬುಧವಾರ ನಸುಕಿನ 3 ಗಂಟೆಯ ಸುಮಾರಿಗೆ ಗದಗ ನಗರದ ಹೊರವಲಯದಲ್ಲಿರುವ ಸಾರಿಗೆ ನಗರದ ಬಳಿ ಮನೆಗಳ್ಳತನದ ತಯಾರಿಯೊಂದಿಗೆ ಗುದ್ದಲಿ, ಕಬ್ಬಿಣದ ರಾಡ್ ಇತ್ಯಾದಿಗಳೊಂದಿಗೆ ಬೈಕ್ ಹತ್ತಿರ ನಿಂತಿದ್ದ ಆರೋಪಿತನನ್ನು ಗಸ್ತಿನಲ್ಲಿದ್ದ ಇಆರ್‌ಎಸ್‌ಎಸ್ ಸಿಬ್ಬಂದಿಗಳು ಬೆನ್ನಟ್ಟಿ ಹಿಡಿದು ವಿಚಾರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಜೂನ್.೨೪ರಂದು ದಾಖಲಾಗಿದ್ದ ಮನೆಗಳ್ಳತನದ ಆರೋಪಿಯೂ ಈತನೇ ಎಂದು ತಿಳಿದುಬಂದಿದ್ದು, ಸದರಿ ಆರೋಪಿತನಿಂದ 2.5 ಲಕ್ಷ. ರೂ ಬೆಲೆಬಾಳುವ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಎಲ್ಲ ಸಂದರ್ಭಗಳಲ್ಲೂ ಧನಾತ್ಮಕವಾಗಿ ಸ್ಪಂದಿಸಿದ ಅಧಿಕಾರಿ/ಸಿಬ್ಬಂದಿಗಳಾದ ಗ್ರಾಮೀಣ ಠಾಣೆಯ ಎಎಸ್ಐ ಎನ್ ಎಫ್ ಬೆಟಗೇರಿ, ಡಿಎಆರ್ ನ ಎಆರ್ ಎಸ್ಐ ಆರ್ ಎಸ್ ರಾಠೋಡ, ಸಿಬ್ಬಂದಿಗಳಾದ ಎಂ.ಎಸ್. ಅಂಗಡಿ(ನಿಸ್ತಂತು), ಎಂ.ಎಸ್. ನೂರುಖಾನವರ(ಎಚ್.ಸಿ), ಎಂ.ಎಸ್. ದೊಡ್ಡಮನಿ(ಮುಳಗುಂದ ಠಾಣೆ) ಹಾಗೂ ನಿಯಾಜ್ ಅಹ್ಮದ್.ಎನ್. ದಳವಾಯಿ, ಎಸ್ ಎಸ್ ತೇಲಸಂಗಿ, ಬಿ ಆರ್ ಚೌಡರ್, ಕೆ ಬಿ ಕಂಬಳಿ ಇವರನ್ನು “Best Responder Of The Month” ಎಂದು ಗುರುತಿಸಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಪ್ರಶಂಸನಾ ಪತ್ರ ನೀಡಿ ಗೌರವಿಸಿ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ಶಿವಪ್ರಕಾಶ ದೇವರಾಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರು ಯಾವುದೇ ಸಂದರ್ಭದಲ್ಲೂ ಧೃತಿಗೆಡದೇ ಪೊಲೀಸ್ ಇಲಾಖೆಯ ಸಹಕಾರ ಅವಶ್ಯವೆನಿಸಿದಲ್ಲಿ ತಕ್ಷಣ ಇಲಾಖೆಯ ಸಹಾಯವಾಣಿ ಇಆರ್‌ಎಸ್‌ಎಸ್-112 ಸಂಪರ್ಕಿಸಿ. ನಮ್ಮ ಸಿಬ್ಬಂದಿಗಳು ಸದಾ ಸಹಕಾರಕ್ಕೆ ಸಿದ್ಧವಾಗಿದ್ದಾರೆ ಎಂದು ಪೊಲೀಸ್ ಅಧೀಕ್ಷಕರು ಸಾರ್ವಜನಿಕರಿಗೆ ತಿಳಿಸಿದ್ದಾರೆ.