ವಿಜಯಸಾಕ್ಷಿ ಸುದ್ದಿ, ಮಂಡ್ಯ
ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ತವರಿನಲ್ಲಿಯೇ ಹೇಯ ಕೃತ್ಯವೊಂದು ನಡೆದಿದ್ದು, ಬೆಳಕಿಗೆ ಬಂದಿದೆ.
ಅಲ್ಲದೇ, ಈ ಕೃತ್ಯ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರವಾಗಿರುವ ಕೆ.ಆರ್. ಪೇಟೆಯಲ್ಲಿ ನಡೆದಿದೆ. ಕೊರೊನಾ ಸೊಂಕಿನಿಂದ ಸತ್ತವರ ಸಂಸ್ಕಾರಕ್ಕೆ ಗುಂಡಿ ತೊಡಲು ರೂ. 4500ಕ್ಕೆ ಬೇಡಿಕೆ ಇಟ್ಟ ಪ್ರಸಂಗ ನಡೆದಿದೆ. ಅಷ್ಟೇ ಅಲ್ಲದೇ, ಅವರ ಪಾಪಿ ಕೃತ್ಯ ಇಷ್ಟಕ್ಕೆ ಮುಗಿದಿಲ್ಲ. ಗುಂಡಿ ಮುಚ್ಚಲು ಮತ್ತೆ ಹಣ ಕೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ತಾಲೂಕಾದ ಕೆ.ಆರ್. ಪೇಟೆಯಲ್ಲಿ ಶವ ಸಂಸ್ಕಾರಕ್ಕೆ ಬಂದವರನ್ನು ಹಣಕ್ಕಾಗಿ ಗಂಟೆಗಟ್ಟಲೆ ಕಾಯಿಸಲಾಗಿದೆ. ಪಿಡಿಓ ಒಬ್ಬರು ಹಣ ಪಡೆದು ಜೆಸಿಬಿ ಯಿಂದ ಗುಂಡಿ ತೆಗಿಸಿ ಮತ್ತೆ ಮಣ್ಣು ಮುಟ್ಟಲು ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಹೀಗಾಗಿ ಶವಸಂಸ್ಕಾರದ ಎಲ್ಲ ಕಾರ್ಯಗಳನ್ನು ಮುಗಿಸಿದ್ದ ಸ್ವಯಂ ಸೇವಕರು ಮಣ್ಣು ಮುಚ್ಚಲು ಕಾಯ್ದು ಕುಳಿತಿದ್ದರು. ತಹಶೀಲ್ದಾರ್ ಅವರ ಮಧ್ಯಪ್ರವೇಶದಿಂದ ಈ ಸಮಸ್ಯೆ ಬಗೆ ಹರಿದಿದೆ. ಹೀಗೆ ಕೊರೊನಾದಿಂದ ಸತ್ತವರ ಕುಟುಂಬಸ್ಥರಿಂದ ಫೋನ್ ನಲ್ಲಿಯೇ ಡೀಲ್ ಮಾಡಿ ಪಿಡಿಓ ಗಳು ಹಣ ಮಾಡುತ್ತಿದ್ದಾರೆ ಎಂಬ ಆರೋಪ ಈ ಭಾಗದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ಇಂತಹ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಮನವಿ ಮಾಡುತ್ತಿದ್ದಾರೆ.