ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಸೋಂಕಿನ ಎರಡನೇ ಅಲೆ ಈಗಾಗಲೇ ಜನರನ್ನು ಸಾಕಷ್ಟು ಆತಂಕಕ್ಕೆ ದೂಡಿದೆ. ಇದರ ಮಧ್ಯೆಯೂ ರಾಜ್ಯದಲ್ಲಿ ಮೂರನೇ ಅಲೆಯ ಮಾತು ಕೇಳಿ ಬರುತ್ತಿದ್ದು, ಜನ ಬೆಚ್ಚಿ ಬೀಳುವಂತಾಗಿದೆ.
ಸದ್ಯ ರಾಜ್ಯದಲ್ಲಿ ಪ್ರತಿ ದಿನ 40 ಸಾವಿರದ ಆಸುಪಾಸಿನಲ್ಲಿ ಸೋಂಕಿತರ ಸಂಖ್ಯೆ ದಾಖಲಾಗುತ್ತಿದೆ. ಈ ಸಂದರ್ಭದಲ್ಲಿ ಇದೇ ವರ್ಷದ ಅಕ್ಟೋಬರ್ ತಿಂಗಳ ಸಮಯದಲ್ಲಿ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ತಾಂತ್ರಿಕ ಸಲಹಾ ಸಮಿತಿಯ ವಿಶ್ಲೇಷಕರ ತಂಡ ನೀಡಿರುವ ವರದಿಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.
ರಾಜ್ಯದಲ್ಲಿ ಮೇ ಹಾಗೂ ಜುಲೈ ತಿಂಗಳವರೆಗೆ 2ನೇ ಅಲೆಯೇ ಇರಲಿದ್ದು, ಆದಾದ ನಂತರ ಮೂರನೇ ಅಲೆ ಇರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಯುರೋಪಿಯನ್ ರಾಷ್ಟ್ರಗಳಲ್ಲಿ ಕೊರೊನಾ ಪರಿಸ್ಥಿತಿ ಗಮನಿಸಿದರೆ ಖಂಡಿತವಾಗಿಯೂ ರಾಜ್ಯದಲ್ಲಿಯೂ ಮೂರನೇ ಅಲೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈಗಿನಿಂದಲೇ ಜನರು ಎಚ್ಚರ ವಹಿಸಬೇಕು ಎಂದು ತಜ್ಞರು ಕಿವಿ ಮಾತು ಹೇಳಿದ್ದಾರೆ.
ಲಸಿಕೆ ಪಡೆದುಕೊಳ್ಳುವುದರ ನಡುವೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ಶುದ್ಧವಾಗಿ ತೊಳೆಯುವುದು ಸೇರಿದಂತೆ ಕೊವಿಡ್-19 ತೊಲಗಿಸಲು ವೈದ್ಯರು ನೀಡಿರುವ ಸಲಹೆಗಳನ್ನು ಚಾಚು ತಪ್ಪದೆ ಜನರು ನಿರ್ವಹಿಸಬೇಕು ಎಂದು ತಜ್ಞರು ಹೇಳಿದ್ದಾರೆ.