ಈ ಸ್ವಾಮೀಜಿ ಕೊರೊನಾ ಗೆದ್ದಿರುವುದು ಪವಾಡವೇ ಸರಿ!

0
Spread the love

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ

Advertisement

ಮನೋಬಲ, ಆತ್ಮಸ್ಥೈರ್ಯ ಒಂದಿದ್ದರೆ ಕೊರೊನಾ ಮಹಾಮಾರಿ ಜಯಿಸಬಹುದು ಎಂಬುವುದಕ್ಕೆ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಶ್ರೀಗಳು ನಿದರ್ಶನವಾಗಿದ್ದು, ಆಕ್ಸಿಜನ್ ಮಟ್ಟ 60ಕ್ಕೆ ಇಳಿದಿದ್ದರೂ ಈಗ ಕೋವಿಡ್ ಗೆದ್ದು ಚೇತರಿಕೆ ಕಾಣುತ್ತಿದ್ದಾರೆ.

ಮಹದೇಶ್ವರ ಬೆಟ್ಟದ ಸಾಲೂರು ಬೃಹ್ನಮಠದ ಹಿರಿಯ ಗುರುಸ್ವಾಮಿಗಳಿಗೆ 65 ವರ್ಷ ವಯಸ್ಸಾಗಿತ್ತು. ಹೃದ್ರೋಗ ಸಮಸ್ಯೆಯ ಹಿನ್ನೆಲೆಯಲ್ಲಿ ಆ್ಯಂಜಿಯೋಪ್ಲಾಸ್ಟಿ ಮಾಡಿ 3 ಸ್ಟಂಟ್‌ ಗಳನ್ನು ಅಳವಡಿಸಲಾಗಿತ್ತು. ಎರಡೂ ಕಿಡ್ನಿಗಳ ಫಂಕ್ಷನಿಂಗ್ ಕಡಿಮೆ ಇದ್ದು, ಒಂದು ಬಾರಿ ಪಾರ್ಶ್ವವಾಯುಗೆ ತುತ್ತಾಗಿದ್ದರು.
ಇದರೊಂದಿಗೆ ಅಧಿಕ ಮಧುಮೇಹ, ರಕ್ತದೊತ್ತಡ ಅವರನ್ನು ಕಾಡುತ್ತಿತ್ತು. ಈ ಸಂದರ್ಭದಲ್ಲಿ ಶ್ರೀಗಳಿಗೆ ಕೋವಿಡ್ ವಕ್ಕರಿಸಿತ್ತು. ಬಳಿಕ ಆಕ್ಸಿಜನ್ ನೆರವಿನಿಂದಲೇ ಉಸಿರಾಡಬೇಕಾದ ಪರಿಸ್ಥಿತಿಯೂ ಬಂದಿತ್ತು. ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳಿದ್ದರೂ ಹಿರಿಯ ಶ್ರೀಗಳು ಕೊರೊನಾ ಗೆದ್ದು ಚೇತರಿಕೆ ಕಾಣುತ್ತಿದ್ದಾರೆ.

ಮೇ ತಿಂಗಳ ಆರಂಭದಲ್ಲಿ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆಯಲು ಮೈಸೂರಿನ ಜೆಎಸ್ಸೆಸ್ ಆಸ್ಪತ್ರೆಗೆ ಶ್ರೀಗಳು ತೆರಳಿದ್ದರು. ಆಗ ಅವರಲ್ಲಿ ಸೋಂಕು ಕಂಡು ಬಂದಿತ್ತು. ಆ ನಂತರ ಅವರ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಆಕ್ಸಿಜನ್ ಮಟ್ಟ 50ರಿಂದ 60ಕ್ಕೆ ಇಳಿದಿತ್ತು. ಜೆಎಸ್ಸೆಸ್ ಆಸ್ಪತ್ರೆಯಲ್ಲಿಯೇ ಅವರು ಮೂರು ದಿನಗಳ ಕಾಲ ಚಿಕಿತ್ಸೆ ಪಡೆದರು. ಆನಂತರ ಮೈಸೂರಿನ ಆಲನಹಳ್ಳಿಯ ಸಾಲೂರು ಶಾಖಾ ಮಠದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಅಲ್ಲಿ ಶ್ರೀಗಳ ಉಸಿರಾಟದ ಮಟ್ಟ ಕ್ಷೀಣಿಸಿ, ಊಟ, ತಿಂಡಿ ಕೂಡ ಬಿಟ್ಟಿದ್ದರು. ಆ ನಂತರ ಚೇತರಿಸಿಕೊಳ್ಳುತ್ತ ಗುಣಮುಖರಾಗಿದ್ದಾರೆ.

ಈಗ ಸ್ವಲ್ಪ ಆಹಾರ ಸೇವಿಸುತ್ತಿದ್ದಾರೆ. ಕಡಿಮೆ ಆಕ್ಸಿಜನ್ ಬಳಸುತ್ತಿದ್ದಾರೆ. ದಿನಕ್ಕೆ ಎರಡು ಬಾರಿ ಶಿವಪೂಜೆ ಮಾಡುತ್ತಾ, ವಿಶ್ರಾಂತಿ ಪಡೆಯುತ್ತಿದ್ದಾರೆ. ಶ್ರೀಗಳು ಪವಾಡ ಎಂಬಂತೆ ಬದುಕಿ ಬಂದಿರುವುದಕ್ಕೆ ಭಕ್ತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಕೊರೊನಾದಿಂದಾಗಿ ಗಂಭೀರ ಸ್ಥಿತಿಗೆ ತಲುಪಿದ್ದ ಸಾಲೂರು ಶ್ರೀಗಳು ಧೈರ್ಯ, ನಂಬಿಕೆಗಳಿಂದ ಗಂಭೀರ ಕಾಯಿಲೆಗಳ ನಡುವೆಯೂ ಕೊರೊನಾ ಜಯಿಸಬಹುದು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.


Spread the love

LEAVE A REPLY

Please enter your comment!
Please enter your name here