ವಿಜಯಸಾಕ್ಷಿ ಸುದ್ದಿ, ಗದಗ
ಬಿಜೆಪಿ ಹಿರಿಯ ನಾಯಕ, ಹಾನಗಲ್ ಕ್ಷೇತ್ರದ ಶಾಸಕ ಹಾಗೂ ಲೋಕೋಪಯೋಗಿ ಇಲಾಖೆ ಮಾಜಿ ಸಚಿವ ಸಿ.ಎಂ. ಉದಾಸಿ ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕುಟುಂಬಸ್ಥರು ಮತ್ತು ಅತ್ಯಾಪ್ತರಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಅಂತ್ಯಕ್ರಿಯೆಗೆ ಆಗಮಿಸದೇ, ತಾವು ಇರುವ ಸ್ಥಳದಲ್ಲೇ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದು ಸಂಸದ ಶಿವಕುಮಾರ ಉದಾಸಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ತಂದೆಯವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹಾನಗಲ್‌ನಲ್ಲಿ ಬುಧವಾರ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಅವರ ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೋವಿಡ್ ಅಡ್ಡಿಯಾಗಿದೆ ಎಂದು ತಿಳಿಸಿದ್ದಾರೆ.
ನಾಡಿನುದ್ದಕ್ಕೂ ಸಿ.ಎಂ. ಉದಾಸಿ ಅವರು ಪಕ್ಷಾತೀತವಾಗಿ ಲಕ್ಷಾಂತರ ಅಭಿಮಾನಿಗಳು, ಬೆಂಬಲಿಗರನ್ನು ಹೊಂದಿದ್ದಾರೆ. ಅವರ ಅಗಲಿಕೆಯಿಂದ ಎಲ್ಲರಿಗೂ ದುಃಖವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಗದಗ ಮತ್ತು ಹಾವೇರಿಯಲ್ಲಿ ಪ್ರತ್ಯೇಕವಾಗಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗುತ್ತಿದ್ದು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.