ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಪ್ರಧಾನಿ ನರೇಂದ್ರ ಮೋದಿ ಅವರು 2 ಕೋಟಿ ಉದ್ಯೋಗ ಸೃಷ್ಟಿ ಮಾಡಿಲ್ಲ. ದೇಶದ ಜನರಿಗೆ ಮೋದಿ ಸುಳ್ಳು ಹೇಳುತ್ತಿರುವ ಬಗ್ಗೆ ಶಾಸಕ ಎಚ್.ಕೆ. ಪಾಟೀಲ ಅವರು, ಗದಗ ಮತಕ್ಷೇತ್ರದ ಜನರಿಗೆ ಹೇಳಿರುವ ಸುಳ್ಳುಗಳ ಬಗ್ಗೆಯೂ ಮಾತನಾಡಲಿ ಎಂದು ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ ವಾಗ್ದಾಳಿ ನಡೆಸಿದರು.
ಉದ್ಯೋಗ ಸೃಷ್ಟಿ ವಿಷಯದಲ್ಲಿ ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಎಚ್.ಕೆ. ಪಾಟೀಲ ನೀಡಿರುವ ಹೇಳಿಕೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ರಾಷ್ಟ್ರೀಯ ನಾಯಕರಾಗಿ ಬಿಂಬಿಸಿಕೊಳ್ಳುತ್ತಿರುವ ಎಚ್.ಕೆ. ಪಾಟೀಲ ಮೊದಲು ಗದಗ ಕ್ಷೇತ್ರದ ಜನರಿಗೆ ಎಷ್ಟು ಸುಳ್ಳು ಹೇಳಿದ್ದಾರೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ತಮ್ಮ ಅಧಿಕಾರಾವಧಿಯಲ್ಲಿ ಕೇವಲ ಸುಳ್ಳು ಹೇಳುತ್ತಲೆ ಬಂದಿರುವ ಪಾಟೀಲರಿಗೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು.
ಸಾರ್ವಜನಿಕ ಲೆಕ್ಕ ಪರಿಶೋಧನೆ ಸಮಿತಿ ಅಧ್ಯಕ್ಷರಾಗಿ ರಾಜ್ಯ ಸರಕಾರದ ಭ್ರಷ್ಟಾಚಾರದ ಬಗ್ಗೆ ಮಾತಾಡುವ ಎಚ್.ಕೆ. ಪಾಟೀಲ, ತಾವು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣದಲ್ಲಿ ಭ್ರಷ್ಟಾಚಾರದ ಆಗಿದೆ ಎನ್ನುವ ಆರೋಪದ ಬಗ್ಗೆ ಯಾವುದೇ ತನಿಖೆಗೆ ಒತ್ತಾಯಿಸುವುದಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಉದ್ಯೋಗ ಸೃಷ್ಟಿ ಮಾಡಿಲ್ಲ ಎಂದು ಆರೋಪಿಸುವ ಶಾಸಕರು, ಬಿಜೆಪಿ ಫೋಸ್ಕೋ ನಿರ್ಮಾಣಕ್ಕೆ ಮುಂದಾದಾಗ ಅದನ್ನು ಓಡಿಸುವ ಕೆಲಸವನ್ನು ಎಚ್.ಕೆ. ಪಾಟೀಲ ಮಾಡಿದ್ದಾರೆ. ಆ ಮೂಲಕ ಸ್ಥಳೀಯ ತಾಂತ್ರಿಕ ಪದವೀಧರರಿಗೆ ಉದ್ಯೋಗ ಸಿಗದಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ದೇಶದ ಬೆಳವಣಿಗೆ ಬಗ್ಗೆ ದೂರದೃಷ್ಟಿ ಹೊಂದಿರಬೇಕು. ಅಂಥ ದೃಷ್ಟಿಕೋನ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ವಿಶ್ವವೇ ಮೆಚ್ಚುಗೆ ಸೂಚಿಸುತ್ತದೆ. ಅಂಥ ಪ್ರಧಾನಿ ಬಗ್ಗೆ ಮಾತಾಡುವ ನೈತಿಕತೆ ಎಚ್. ಕೆ. ಪಾಟೀಲ ಅವರಿಗಿಲ್ಲ ಎಂದು ತಿಳಿಸಿದರು.