HomeGadag Newsಎತ್ತಿನಗಾಡಿಯಲ್ಲಿ ಶಾಲೆಗೆ ಬಂದ ಮಕ್ಕಳು!

ಎತ್ತಿನಗಾಡಿಯಲ್ಲಿ ಶಾಲೆಗೆ ಬಂದ ಮಕ್ಕಳು!

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ ಗದಗ: ಹೊಸ ಶೈಕ್ಷಣಿಕ ವರ್ಷದ ಮೊದಲ ದಿನವೇ ಮಕ್ಕಳಲ್ಲಿ ಶಾಲೆಯ ಬಗ್ಗೆ ಪ್ರೀತಿ, ಉತ್ಸಾಹ ಮತ್ತು ಆತ್ಮೀಯತೆ ಮೂಡಿಸುವ ಉದ್ದೇಶದಿಂದ ಗದಗ ತಾಲೂಕಿನ ಅಸುಂಡಿಯ ಕುವೆಂಪು ಶತಮಾನೋತ್ಸವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾರಂಭೋತ್ಸವವನ್ನು ಅದ್ದೂರಿಯಾಗಿ ಹಾಗೂ ವಿಶಿಷ್ಟವಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳ ಭವ್ಯ ಮೆರವಣಿಗೆ ನಡೆಯಿತು. ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಮಕ್ಕಳನ್ನು ಕೂರಿಸಿಕೊಂಡು ಗ್ರಾಮದಲ್ಲಿ ಮೆರವಣಿಗೆ ನಡೆಸಿ ಶಾಲೆಗೆ ಕರೆತರಲಾಯಿತು. ಮೆರವಣಿಗೆಯುದ್ದಕ್ಕೂ ಗ್ರಾಮಸ್ಥರು ಹರ್ಷೋದ್ಗಾರಗಳೊಂದಿಗೆ ಮಕ್ಕಳನ್ನು ಸ್ವಾಗತಿಸಿದರು.
ಶಾಲೆಯ ಮುಖ್ಯ ದ್ವಾರದಲ್ಲಿ ಅತಿಥಿಗಳು ಹಾಗೂ ಶಿಕ್ಷಕರು ಮಕ್ಕಳ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ವಿಶೇಷವಾಗಿ ನಿರ್ಮಿಸಲಾಗಿದ್ದ ಸೆಲ್ಫಿ ಕಾರ್ನರ್ ವಿದ್ಯಾರ್ಥಿಗಳು ಮತ್ತು ಪಾಲಕರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ, “ಶಿಕ್ಷಣವು ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕು. ಮಕ್ಕಳಿಗೆ ಸುರಕ್ಷಿತ, ಸಂತೋಷದಾಯಕ ಹಾಗೂ ಪ್ರೇರಣಾದಾಯಕ ವಾತಾವರಣದಲ್ಲಿ ಶಿಕ್ಷಣ ದೊರೆಯಬೇಕು” ಎಂದು ಹೇಳಿದರು.
“ಶಾಲೆಯ ಮೊದಲ ದಿನವೇ ಮಕ್ಕಳಲ್ಲಿ ಶಾಲೆಯ ಬಗ್ಗೆ ಪ್ರೀತಿ ಮತ್ತು ಆತ್ಮೀಯತೆ ಮೂಡಬೇಕು. ಅದಕ್ಕಾಗಿ ಶಿಕ್ಷಕರು, ಪಾಲಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು” ಎಂದು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಆಧುನಿಕ ಕಲಿಕಾ ಸೌಲಭ್ಯಗಳು, ಗುಣಮಟ್ಟದ ಶಿಕ್ಷಕರು, ಉಚಿತ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ವಿದ್ಯಾರ್ಥಿ ಸ್ನೇಹಿ ವ್ಯವಸ್ಥೆಗಳು ಲಭ್ಯವಿವೆ. ಗ್ರಾಮೀಣ ವಿದ್ಯಾರ್ಥಿಗಳೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಹೊಂದುವಂತೆ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಶಿಕ್ಷಣದ ಮಹತ್ವವನ್ನು ವಿಶಿಷ್ಟವಾಗಿ ವಿವರಿಸಿದ ಅವರು, “ಶಿಕ್ಷಣ ಕೊತ್ತಂಬರಿ ಸೊಪ್ಪಿನಂತಿದ್ದು, ಅದು ಎಲ್ಲೆ ಇದ್ದರೂ ತನ್ನ ಸುವಾಸನೆ ಹರಡುತ್ತದೆ. ಮಕ್ಕಳು ತಾವು ಓದುತ್ತಿರುವ ಶಾಲೆಯನ್ನು ಹೆಮ್ಮೆಯಿಂದ ಕಾಣಬೇಕು” ಎಂದು ಕರೆ ನೀಡಿದರು.
ನಿವೃತ್ತ ಉಪನಿರ್ದೇಶಕ ಎ.ಎನ್. ನಾಗರಳ್ಳಿ ಮಾತನಾಡಿ, “ಶಿಕ್ಷಕರು ಬದ್ಧತೆಯಿಂದ ಪಾಠ ಮಾಡಿದರೆ ಮಕ್ಕಳು ಖಂಡಿತ ಕಲಿಯುತ್ತಾರೆ. ಮಕ್ಕಳಲ್ಲಿ ಜ್ಞಾನ ಮತ್ತು ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ” ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಎಚ್.ಕೆ. ಬೂಮ್ಮಕ್ಕನವರ ಮಾತನಾಡಿ, “ಖಾಸಗಿ ಶಾಲೆಗಳ ಹೆಚ್ಚಳದ ನಡುವೆಯೂ ಸರ್ಕಾರಿ ಶಾಲೆಗಳ ಅಸ್ತಿತ್ವ ಉಳಿಯಬೇಕು. ಪಾಲಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಸಮಾಜದ ಎಲ್ಲ ವರ್ಗದವರು ಕೈಜೋಡಿಸಬೇಕು” ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಅಭಿವೃದ್ಧಿ) ಕೆ.ಡಿ. ಬಡಿಗೇರ ಮಾತನಾಡಿ, “ಒಂದು ಮಗುವೂ ಸರ್ಕಾರಿ ಶಾಲೆಯಿಂದ ಖಾಸಗಿ ಶಾಲೆಗೆ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರ ಮೇಲಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆ.ಎ. ಭಾವಿಕಟ್ಟಿ, ರವಿ ಪ್ರಕಾಶ, ಬಿ.ಎಫ್. ಪೂಜಾರ, ವಿ.ಎಂ. ಹಿರೇಮಠ, ರವಿರಾಜ ಪವಾರ, ಶ್ರೀಮತಿ ಗೀತಾ ಕುಲಕರ್ಣಿ, ಎಂ.ಡಿ. ಹೊಸಮನಿ, ವಿ.ಎಫ್. ಕಲಕುಂಬಿ, ಶಂಕರ ಹಡಗಲಿ, ಶ್ರೀಮತಿ ಶೈಲಜಾ ಮಟ್ಟಿ, ಡಾ. ಬಸವರಾಜ ವಿ.ಎಚ್. ಬಳ್ಳಾರಿ, ಎಚ್.ವೈ. ಹೊನ್ನಿನಾಯ್ಕರ, ಸೋಮರೆಡ್ಡಿ ರಾಮೇನಳ್ಳಿ, ಶಿವಾನಂದ ಕರಿಗಾರ, ಫಕಿರೆಡ್ಡಿ ಮಾಡಳ್ಳಿ, ತಾಜುದ್ದೀನ್ ಓಲೇಕಾರ, ಶ್ರೀಮತಿ ರೇಖಾ ತಿಮ್ಮನಗೌಡ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಎಪಿಸಿಒ ಶಿವಕುಮಾರ ಕುರಿ ಸ್ವಾಗತಿಸಿದರು. ವಿ.ವಿ. ನಡುವಿನಮನಿ ವಂದಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ಡಿ.ಎಚ್. ಪರಂಗಿ ಕಾರ್ಯಕ್ರಮ ನಿರೂಪಿಸಿದರು.
 “ಶಾಲೆಯ ಮೊದಲ ದಿನ ಮಕ್ಕಳ ಮುಖದಲ್ಲಿ ಮೂಡುವ ಸಂತಸವೇ ವರ್ಷಪೂರ್ತಿ ಕಲಿಕೆಯ ಉತ್ಸಾಹಕ್ಕೆ ಅಡಿಪಾಯವಾಗುತ್ತದೆ.”
ಆರ್.ಎಸ್. ಬುರಡಿ, ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ
ಹೊಸ ಪುಸ್ತಕ-ಸಮವಸ್ತ್ರ ಪಡೆದು ಖುಷಿಯಾದ ಮಕ್ಕಳು
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು. ಹೊಸ ಪುಸ್ತಕ ಹಾಗೂ ಸಮವಸ್ತ್ರ ಪಡೆದ ಮಕ್ಕಳ ಮುಖದಲ್ಲಿ ಸಂತಸ ಮನೆ ಮಾಡಿತ್ತು.
ಅಸುಂಡಿ ಶಾಲಾ ಮಕ್ಕಳಿಂದ ನಾಡಗೀತೆ ಪ್ರಸ್ತುತಪಡಿಸಲಾಯಿತು. ಮಲ್ಲಸಮುದ್ರ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು.

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!