ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಮಣ್ಣಿನ ಮಕ್ಕಳ ಕಲ್ಲು; ಸಿದ್ದರಾಮಯ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಕೋಲಾರ

Advertisement

ಎತ್ತಿನಹೊಳೆ ಹಾಗೂ ಕೆಸಿ ವ್ಯಾಲಿ ನೀರಾವರಿ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುವ ಮೂಲಕ ‘ಕಲ್ಲು’ಹಾಕಲು ಹವಣಿಸಿದ್ದ ಮಣ್ಣಿನಮಕ್ಕಳು, ಈಗ ನನ್ನ ತಲೆಯ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ಮಾಲೂರು ತಾಲೂಕಿನ ದೊಡ್ಡಶಿವಾರ ಈಶ್ವರಕೆರೆ ನಾಲ್ಕು ದಶಕದ ಬಳಿಕ ಭರ್ತಿಯಾದ ಹಿನ್ನೆಲೆಯಲ್ಲಿ ಕೆರೆಗೆ ಬಾಗಿನ ಅರ್ಪಿಸಿದ ನಂತರ ಅವರು ಮಾತನಾಡಿದರು.

ಮಳೆಯ ಜೂಜಾಟದಲ್ಲಿ ಪಾತಾಳಕ್ಕೆ ಕುಸಿದಿದ್ದ ಕೋಲಾರ ಜಿಲ್ಲೆಯಲ್ಲಿನ ಅಂತರ್ಜಲ ಈಗ ಕೆಸಿ ವ್ಯಾಲಿ ನೀರಾವರಿ ಯೋಜನೆಯಿಂದಾಗಿ ಪುನಶ್ಚೇತನ ಕಂಡಿದೆ. 800- 900 ಅಡಿಗೂ ನಿಲುಕದ ಅಂತರ್ಜಲ, ಯೋಜನೆಯ ಅನುಷ್ಠಾನದಿಂದಾಗಿ 300- 500ರ ಅಡಿಗೆ ನೀರು ಕಾಣುವಂತಾಗಿದೆ. ಯೋಜನೆಗೆ ಅಡ್ಡಿಗಾಲು ಹಾಕಿದ್ದ ಮಣ್ಣಿನಮಕ್ಕಳಿಗೆ ತಕ್ಕಪಾಠ ಕಲಿಸಿ ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಅವರು ಸ್ವಘೋಷಿತ ಮಣ್ಣಿನಮಕ್ಕಳು. ನಾವು ರೈತರ ಮಕ್ಕಳು ಎಂದು ದೇವೇಗೌಡರನ್ನು ಕಾಲೆಳೆದ ಸಿದ್ದರಾಮಯ್ಯ, ಮುಂದೆ ನಮ್ಮ ಸರ್ಕಾರ ಬಂದೇ ಬರುತ್ತೇ. ಆಗ ಬಾಕಿ ಉಳಿದಿರುವ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ. ಆದರೆ, ಈಗಿನ ಬಿಜೆಪಿ ಸರ್ಕಾರ ನೀರಾವರಿ ಯೋಜನೆಗಳನ್ನ ಅನುಷ್ಠಾನಕ್ಕೆ ತರಲು ಸರ್ಕಾರದ ಬಳಿ ಹಣವೇ ಇಲ್ಲ ಎಂದು ಬಿಜೆಪಿ ಸರ್ಕಾರದ ಆಡಳಿತ ವೈಖರಿ ಕುರಿತು ಛೇಡಿಸಿದರು.

ಅನ್ನಭಾಗ್ಯ ಯೋಜನೆ ಅಡಿ ನಮ್ಮ ಸರ್ಕಾರ ಪ್ರತಿ ವ್ಯಕ್ತಿಗೆ ಏಳು ಕೆಜಿ ಅಕ್ಕಿ ವಿತರಣೆ ಮಾಡುತ್ತಿದ್ದೇವು. ಆದರೆ, ಈಗ ಬಿಜೆಪಿ ಸರ್ಕಾರ ಎರಡು ಕೆಜಿ ಕಡಿತಗೊಳಿಸಿದೆ. ಅಕ್ಕಿ ಕಡಿತಗೊಳಿಸಿದ ಸಚಿವ ಉಮೇಶ್ ಕತ್ತಿ ಅವರಿಗೆ ಸಕ್ಕರೆ ಕಾಯಿಲೆ ಇರಬೇಕು. ಅದಕ್ಕಾಗಿ ಅವರು ಅಕ್ಕಿಯನ್ನು ಕಡಿತಗೊಳಿಸಿದ್ದಾರೆ ಎಂದು ಕುಟುಕಿದರು.
ಮಾಲೂರು ಶಾಸಕ ಕೆ.ವೈ. ನಂಜೇಗೌಡ, ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಇತರರು ಇದ್ದರು.

ಬಾಗಿನ ಕಾರ್ಯಕ್ರಮದಲ್ಲಿ ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಜಮಾಯಿಸುವ ಮೂಲಕ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಆರೋಪ ಕೇಳಿ ಬಂತು.

ಬಲವಂತದ ಮತಾಂತರಕ್ಕೆ ನಮ್ಮ ವಿರೋಧ: ಸಿದ್ದು

ಯಾವುದೇ ವ್ಯಕ್ತಿ ಸ್ವಯಂಪ್ರೇರಿತವಾಗಿ ತನ್ನ ಧರ್ಮದಿಂದ ತನಗೆ ಸರಿಕಾಣುವ ಯಾವುದೇ ಧರ್ಮಕ್ಕೆ ಮತಾಂತರಗೊಂಡರೆ ಅದಕ್ಕೆ ನಮ್ಮ ಅಭ್ಯಂತರ ಇಲ್ಲ, ಆದರೆ, ಆಸೆ, ಆಮಿಷಗಳಿಗೆ ಒಳಗಾಗಿ, ಬಲವಂತದಿಂದ ಮತಾಂತರಕ್ಕೆ ಒಳಗಾದರೆ, ಅದಕ್ಕೆ ನಮ್ಮ ವಿರೋಧ ಇದೆ ಎಂದು ಸಿದ್ದರಾಮಯ್ಯ ಇದೇ ವೇಳೆ ಪ್ರತಿಕ್ರಿಯಿಸಿದರು.

ಜೇಬಿಗೆ ಕತ್ತರಿ ಹಾಕಿದ ದುಷ್ಕರ್ಮಿಗಳು

ಈಶ್ವರಕೆರೆ ಭರ್ತಿಯಾಗಿ ಕೋಡಿಬಿದ್ದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಲು ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಸಹಸ್ರಾರು ಜನಸ್ತೋಮ ಜಮಾಯಿಸಿತ್ತು. ಇಂಥಹ ಸಂದರ್ಭವನ್ನೇ ಅವಕಾಶವಾಗಿ ಬಳಸಿಕೊಂಡ ಪುಢಾರಿಗಳು, ತಾಲ್ಲೂಕಿನ ಹುಲ್ಕೂರು ಗ್ರಾಮದ ನಾಗೇಶ್ ಅವರ ಜುಬ್ಬಾದ ಜೇಬಿಗೆ ಕತ್ತರಿ ಹಾಕಿ, ಅವರ ಜೇಬಿನಲ್ಲಿದ್ದ ರೂ. 25ಸಾವಿರ ಹಣವನ್ನು ಎಗರಿಸಿದ ಘಟನೆ ನಡೆದಿದೆ.


Spread the love

LEAVE A REPLY

Please enter your comment!
Please enter your name here