ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಹರಿಯಾಣದಲ್ಲಿ ಶನಿವಾರವೂ ರೈತರು ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡುವ ಮೂಲಕ ಗುರುವಾರ ಆರಂಭಗೊಂಡಿರುವ ಹೋರಾಟವನ್ನು 3ನೇ ದಿನವೂ ಮುಂದುವರೆಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಕೃಷಿ ಸಂಬಂಧಿತ 3 ಮಸೂದೆಗಳನ್ನು, ಅದರಲ್ಲಿ ಮುಖ್ಯವಾಗಿ ಎಪಿಎಂಸಿ ತಿದ್ದಪಡಿ ಮಸೂದೆಯನ್ನು ಭಾರತೀಯ ಕಿಸಾನ್ ಯುನಿಯನ್(ಬಿಕೆಯು) ಸಂಘಟನೆಯ ಅಡಿ ವಿರೋಧಿಸಲಾಗುತ್ತಿದೆ. ಶುಕ್ರವಾರ ಸಂಘಟನೆಯ ನಾಯಕ ಗುರ್ನಮ್ ಸಿಂಗ್ ಚದುಲಿ ಅವರನ್ನು ಬಂಧಿಸಲಾಗಿದ್ದು, ಅವರ ಮೇಲೆ ಸಾಕಷ್ಟು ಕೇಸುಗಳನ್ನು ದಾಖಲಿಸಿರುವುದು ರೈತರಲ್ಲಿ ಆಕ್ರೋಶ ಮೂಡಿಸಿದೆ.
ಸೋಮವಾರದಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ಈ 3 ಮಸೂದೆಗಳಿಗೆ ಅಂಗೀಕಾರ ಪಡೆದುಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ‘ಎಪಿಎಂಸಿಗಳನ್ನು ದುರ್ಬಲಗೊಳಸುವ ಹುನ್ನಾರದ ಹಿಂದೆ ಇನ್ನಷ್ಟು ಸಂಚುಗಳಿವೆ. ಮುಂದೆ ಕನಿಷ್ಠ ಬೆಂಬಲ ಬೆಲೆಯಡಿ ರೈತರ ಉತ್ಪನ್ನಗಳನ್ನು ಕೊಳ್ಳುವ ಯೋಜನೆಯನ್ನು ಕೈಬಿಡಲಿದ್ದಾರೆ’ ಎಂದು ರೈತ ಸಂಘಟನೆಗಳು ಆರೋಪಿಸಿವೆ.
ಹರಿಯಾಣದ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಜನ್‌ನಾಯಕ್ ಜನತಾ ಪಾರ್ಟಿ(ಜೆಜೆಪಿ) ಕೂಡ ಮಸೂದೆ ವಿರೋಧಿಸಿದ್ದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ರೈತರ ಹೋರಾಟಕ್ಕೆ ಹರಿಯಾಣ ಕಾಂಗ್ರೆಸ್ ಸೇರಿದಂತೆ ಇತರ ವಿಪಕ್ಷಗಳು ಬೆಂಬಲಿಸಿವೆ.