ವಿಜಯಸಾಕ್ಷಿ ಸುದ್ದಿ, ಮೈಸೂರು
ಕೊರೊನಾ ಭೀತಿಯ ಮಧ್ಯೆಯೂ ಜುಲೈ 19 ಮತ್ತು 22ರಂದು ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದ್ದು. ಶೇ.99.9ರಷ್ಟು ಫಲಿತಾಂಶ ದಾಖಲಾಗಿದೆ.
157 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಫಲಿತಾಂಶ ಪ್ರಕಟಿಸಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕೊರೊನಾ ಭೀತಿಯ ನಡುವೆಯೂ 8,76,581 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಶೇ.99.9ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಒಂದು ಮಗು ಮಾತ್ರ ತಾನು ಬರೆಯದೇ ಮತ್ತೊಬ್ಬರನ್ನು ಕಳಿಸಿದ್ದರಿಂದಾಗಿ ಶೇ.100ರಷ್ಟು ಫಲಿತಾಂಶ ತಪ್ಪಿದೆ ಎಂದು ತಿಳಿಸಿದರು.
ಈ ವರ್ಷ 1,28,931 ವಿದ್ಯಾರ್ಥಿಗಳು ಎ+ ಗ್ರೇಡ್, 2,50,317 ವಿದ್ಯಾರ್ಥಿಗಳು ಎ ಗ್ರೇಡ್, 2,87,684 ವಿದ್ಯಾರ್ಥಿಗಳು ಬಿ ಗ್ರೇಡ್, 1,13,610 ವಿದ್ಯಾರ್ಥಿಗಳು ಸಿ ಗ್ರೇಡ್ ಪಡೆದಿದ್ದಾರೆ.
8,76,581 ವಿದ್ಯಾರ್ಥಿಗಳಲ್ಲಿ 4,72,643 ವಿದ್ಯಾರ್ಥಿಗಳು ಹಾಗೂ 4,01,282 ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ ಎಂದು ತಿಳಿಸಿದರು.
625ಕ್ಕೆ 625 ಅಂಕಗಳನ್ನು 157 ವಿದ್ಯಾರ್ಥಿಗಳು, 289 ವಿದ್ಯಾರ್ಥಿಗಳು 623, ಇಬ್ಬರು ವಿದ್ಯಾರ್ಥಿಗಳು 622 ಅಂಕ, 449 ವಿದ್ಯಾರ್ಥಿಗಳು 621 ಅಂಕ, 28 ವಿದ್ಯಾರ್ಥಿಗಳು 620 ಅಂಕ ಪಡೆದಿದ್ದಾರೆ. ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡರೆ, ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ ದ್ವಿತೀಯ ಸ್ಥಾನ, ರಾಮನಗರ ಜಿಲ್ಲೆ ತೃತೀಯ ಸ್ಥಾನ ಪಡೆದಿದೆ. ಬಳ್ಳಾರಿ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ ಎಂದರು.