ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ;
ಶಿರಹಟ್ಟಿ ಮೀಸಲು ಮತಕ್ಷೇತ್ರಕ್ಕೆ ಸರ್ಕಾರದಿಂದ ವಿವಿಧ ಇಲಾಖೆಗಳ ಮೂಲಕ ಹಲವಾರು ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಆದರೆ ಇವುಗಳ ಪ್ರಗತಿ ನಡೆಸುವುದಕ್ಕಾಗಿ ತಾಲೂಕು ಪಂಚಾಯಿತಿಯಲ್ಲಿ ಆಗಾಗ್ಗೆ ನಡೆಯಬೇಕಿದ್ದ ಪ್ರಗತಿ ಪರಿಶೀಲನಾ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಪದೇಪದೇ ಗೈರಾಗುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತನ ತಾಲೂಕಿನ ಅಭಿವೃದ್ಧಿಗೆ ಮಾರಕವಾಗುತ್ತಿದೆ ಅಲ್ಲದೇ, ಸಭೆಗಳು ನಾಮಕೆವಾಸ್ತೆ ನಡೆಯುತ್ತಿವೆ.
ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಹಾಗೂ ತಾಲೂಕು ಪಂಚಾಯತಿ ಆಡಳಿತಾಧಿಕಾರಿ ವಾಗೀಶ್ ಶಿವಾಚಾರ್ಯ ಇವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಾಮಾನ್ಯ ಸಭೆ ಜರುಗಿತು.
ಸಭೆಯಲ್ಲಿ ಸಣ್ಣ ನೀರಾವರಿ, ಕೆಆರ್‌ಡಿಎಲ್, ನಿರ್ಮಿತಿ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಬಕಾರಿ, ಕೆಎಸ್‌ಆರ್‌ಟಿಸಿ, ಆಹಾರ ಶಿರಸ್ತೆದಾರ, ಪ್ರಾದೇಶಿಕ ಅರಣ್ಯ, ಭೂಮಾಪನ, ಉಪನೋಂದಣಾಧಿಕಾರಿ, ಕಾರ್ಮಿಕ, ಡಾ.ಬಿ.ಆರ್.ಅಂಬೇಡ್ಕರ್ ನಿಗಮ, ಅಲ್ಪಸಂಖ್ಯಾತ, ಮೀನುಗಾರಿಕೆ ಇಲಾಖೆ ಹೀಗೆ 16 ಇಲಾಖೆಯ ಅಧಿಕಾರಿಗಳು ಗೈರಾಗಿದ್ದಾರೆ. ಕೇವಲ 15 ಇಲಾಖೆಯ ಅಧಿಕಾರಿಗಳು ಮಾತ್ರ ಸಭೆಗೆ ಹಾಜರಿದ್ದರು. ಅಲ್ಲದೇ, ಮಂಗಳವಾರ ಹಾಲಕೆರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳು ಸಹ ಸಭೆಯಿಂದ ಬೇಗನೆ ನಿರ್ಗಮಿಸಿದರು.
ಅಧಿಕಾರಿಗಳ ಸಭೆ ನಡೆಸದ ಶಾಸಕರು!
ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಜಿಡ್ಡು ಹಿಡಿಯುತ್ತಿರುವಂತಹ ಅಧಿಕಾರಿ ವರ್ಗಕ್ಕೆ ಬಿಸಿ ಮುಟ್ಟಿಸಬೇಕಾಗಿರುವ ಶಾಸಕ ರಾಮಣ್ಣ ಲಮಾಣಿ ಏ.8 ರಂದು ತ್ರೈಮಾಸಿಕ ಸಭೆ ಏರ್ಪಡಿಸಿದ್ದನ್ನು ಬಿಟ್ಟರೆ ಬಳಿಕ ಯಾವುದೇ ಸಭೆ ನಡೆಸಿಲ್ಲ. ಏಳು ತಿಂಗಳಾದರೂ ಯಾವುದೇ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸದಿರುವುದು ಖೇದಕರ. ಅಲ್ಲದೇ, ಶಾಸಕರ ಈ ನಡೆ ಅಧಿಕಾರಿಗಳಿಗೆ ವರದಾನವಾಗಿದೆ.
ಇಒ ಅವರ ನಿರ್ದೇಶನಕ್ಕಿಲ್ಲ ಕಿಮ್ಮತ್ತು
ಸಭೆಗಳಿಗೆ ಅಧಿಕಾರಿಗಳು ಪದೇಪದೇ ಗೈರು ಉಳಿಯುತ್ತಿರುವುದಕ್ಕೆ ತಾಪಂ ಇಒ ಡಾ.ಎನ್.ಎಚ್.ಓಲೇಕಾರ್ ಅವರು ಸಾಕಷ್ಟು ಬಾರಿ ನಿರ್ದೇಶನ ನೀಡಿದರೂ ಇಒ ಅವರಿಗೆ ಕವಡಿ ಕಾಸಿನಷ್ಟು ಕಿಮ್ಮತ್ತಿಲ್ಲದಂತಾಗಿದೆ. ಇಒ ಅವರು ಈ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಲೇ ಬರುತ್ತಿದ್ದಾರೆ.
ಡಿಸಿ ಮತ್ತು ಜಿಲ್ಲಾ ಪಂಚಾಯತ್ ಸಿಇಒ ಗಮನಹರಿಸುವರೇ?
ಶಿರಹಟ್ಟಿ ತಾಲೂಕು ಕೇಂದ್ರದ ಜೊತೆಗೆ ವಿಧಾನಸಭಾ ಮತಕ್ಷೇತ್ರವಾಗಿದ್ದು, ಸರ್ಕಾರದ ಅನುದಾನ ಸದ್ಭ್ಬಳಕೆ ಆಗುತ್ತಿದೆಯೋ.. ಇಲ್ಲವೋ ಎಂಬುದನ್ನು ತಿಳಿಯಲು ನಡೆಸುವ ಪ್ರಗತಿ ಪರಿಶೀಲನಾ ಸಭೆಗಳಿಗೆ ಅಧಿಕಾರಿಗಳು ಗೈರಾಗುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಗಳು ಗಮನಹರಿಸಬೇಕಿದೆ.
ಅಧಿಕಾರಿಗಳು ಸಭೆಗಳಿಗೆ ಪದೇಪದೇ ಗೈರು ಉಳಿಯುತ್ತಿರುವುದು ಕ್ಷೇತ್ರದ ಅಭಿವೃದ್ಧಿಗೆ ಮಾರಕವಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಜಿಪಂ ಸಿಇಒ ಅವರ ಗಮನಕ್ಕೆ ತರುವ ಮೂಲಕ ಶಿಸ್ತುಕ್ರಮ ಜರುಗಿಸುವಂತೆ ಸೂಚಿಸಲಾಗುವುದು. ನವೆಂಬರ್ 15ರ ನಂತರ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು.
ರಾಮಣ್ಣ ಲಮಾಣಿ, ಶಾಸಕರು
ಸಭೆಗೆ ಗೈರು ಉಳಿದಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಿಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ವರದಿ ಸಲ್ಲಿಸಲಾಗುವುದು. ಕ್ರಮ ತೆಗೆದುಕೊಂಡರೆ ಮಾತ್ರ ಮುಂದಿನ ಸಭೆ ನಡೆಸಲಾಗುವುದು.
ಡಾ.ಎನ್.ಎಚ್.ಓಲೆಕಾರ್, ತಾಪಂ ಇಒ