ವಿಜಯಸಾಕ್ಷಿ ಸುದ್ದಿ, ಮುಂಬಯಿ
ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯಾವಳಿ ಕೊರೊನಾದಿಂದಾಗಿ ಅರ್ಧಕ್ಕೆ ನಿಂತಿದೆ. ಆದರೆ, ಕೆಲವು ಪಂದ್ಯಗಳ ದಾಖಲೆಗಳು ಮಾತ್ರ ಅಭಿಮಾನಿಗಳ ಮನಸ್ಮೃತಿಯಿಂದ ಇನ್ನೂ ಮರೆಯಾಗುತ್ತಿಲ್ಲ.
ಏ. 21ರಂದು ನಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯವನ್ನು ಅಭಿಮಾನಿಗಳು ಇನ್ನೂ ಮೆಲುಕು ಹಾಕುತ್ತಿದ್ದಾರೆ. ಅಲ್ಲದೇ, ಈ ಪಂದ್ಯ ಪ್ರಕ್ಷಕರ ದೃಷ್ಟಿಯಿಂದ ಹೊಸ ಇತಿಹಾಸವನ್ನೇ ನಿರ್ಮಿಸಿದೆ.
ಈ ಪಂದ್ಯದಲ್ಲಿ ರನ್ ಹೊಳೆಯೇ ಹರಿದಿತ್ತು. ಈ ನಿಟ್ಟಿನಲ್ಲಿ ಈ ಪಂದ್ಯವನ್ನು ಹೆಚ್ಚು ಜನರು ವೀಕ್ಷಿಸಿದ್ದಾರೆ. ಹೀಗಾಗಿ 2021ರ ಟೂರ್ನಿಯಲ್ಲಿ ಅತಿ ಹೆಚ್ಚು ವೀಕ್ಷಿಸಿದ ಪಂದ್ಯ ಎಂಬ ದಾಖಲೆಗೆ ಈ ಪಂದ್ಯ ಸೇರ್ಪಡೆಗೊಂಡಿದೆ. ಆ ಆಟವನ್ನು ಡಿಸ್ನಿ ಹಾಟ್ ಸ್ಟಾರ್ ನಲ್ಲಿ 7 ದಶ ಲಕ್ಷ ಜನರು ನೇರ ಪ್ರಸಾರದಲ್ಲಿ ವೀಕ್ಷಿಸಿದ್ದಾರೆ.
ಕಳೆದ 2020ರ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬಯಿ ಇಂಡಿಯನ್ಸ್ ನಡುವಿನ ಪಂದ್ಯವನ್ನು 8 ಮಿಲಿಯನ್ ಜನರು ಡಿಸ್ನಿ- ಹಾಟ್ ಸ್ಟಾರ್‌ನಲ್ಲಿ ನೋಡಿದ್ದರು. ಐಪಿಎಲ್ ನ ಇತಿಹಾಸದಲ್ಲಿಯೇ ಅತೀ ಹೆಚ್ಚು ಜನರು ವೀಕ್ಷಿಸಿದ ಪಂದ್ಯಗಳು ಇವು ಎಂದು ದಾಖಲಾಗಿವೆ.
2021ರ ಉದ್ಘಾಟನಾ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬಯಿ ಇಂಡಿಯನ್ಸ್ ನಡುವೆ ನಡೆದಿತ್ತು. ಈ ಪಂದ್ಯವನ್ನು ಡಿಸ್ನಿ- ಹಾಟ್ ಸ್ಟಾರ್‌ನಲ್ಲಿ 6.7 ಮಿಲಿಯನ್ ಜನರು ವೀಕ್ಷಿಸಿದ್ದರು.