ವಿಜಯಸಾಕ್ಷಿ ಸುದ್ದಿ, ಮುಂಬಯಿ
ಮಹಾಮಾರಿಯಿಂದಾಗಿ ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ. ಇದರಿಂದಾಗಿ ಬಿಸಿಸಿಐಗೆ ರೂ. 2 ಸಾವಿರ ಕೋಟಿ ನಷ್ಟವಾಗಿದೆ.
ಐಪಿಎಲ್ ನಲ್ಲಿ ಭಾಗವಹಿಸಿದ್ದ ಆಟಗಾರರಿಗೆ ಹಾಗೂ ಸಹಾಯಕ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಿಸಿಸಿಐ 14ನೇ ಆವೃತ್ತಿಯ ಪಂದ್ಯಗಳನ್ನು ಮುಂದೂಡಿದೆ.
ನಿಗದಿಯಂತೆ ಒಟ್ಟು 60 ಪಂದ್ಯಗಳು ನಡೆಯಬೇಕಿತ್ತು. ಆದರೆ, ಸದ್ಯ 29 ಪಂದ್ಯಗಳು ನಡೆದಿದ್ದವು. ಈ ಸಂದರ್ಭದಲ್ಲಿಯೇ ಟೂರ್ನಿಯನ್ನು ಅರ್ಧದಲ್ಲಿಯೇ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಬಿಸಿಸಿಐ ಪ್ರಸಾರದ ಹಕ್ಕು, ಶೀರ್ಷಿಕೆ ಪ್ರಾಯೋಜಕತ್ವ ಸೇರಿದಂತೆ ಹಲವು ವಿಭಾಗಗಳಿಂದ ಬರಬೇಕಿದ್ದ ರೂ. 2 ಸಾವಿರ ಕೋಟಿ ಅಧಿಕ ಆದಾಯಕ್ಕೆ ಬ್ರೇಕ್ ಬಿದ್ದಿದೆ.
ಈ ಬಾರಿಯ ಐಪಿಎಲ್ ಅರ್ಧದಲ್ಲಿಯೇ ಸ್ಥಗಿತಗೊಂಡಿರುವುದರಿಂದಾಗಿ ರೂ. 2 ಸಾವಿರದಿಂದ ರೂ. 2.5 ಸಾವಿರ ಕೋಟಿ ವರೆಗೆ ನಷ್ಟ ಅನುಭವಿಸಲಿದ್ದೇವೆ. ನನ್ನ ಲೆಕ್ಕಾಚಾರದ ಪ್ರಕಾರ ರೂ. 2200 ಕೋಟಿ ನಷ್ಟ ಅನುಭವಿಸಿದ್ದೇವೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಐಪಿಎಲ್ ಪಂದ್ಯಗಳು ಒಟ್ಟು 52 ದಿನಗಳ ಕಾಲ ನಡೆಯಬೇಕಿದ್ದವು. ಹೀಗಾಗಿ ಅತಿ ಹೆಚ್ಚಿನ ನಷ್ಟ ಪ್ರಸಾರದ ಹಕ್ಕಿನಿಂದ ಬಿಸಿಸಿಐಗೆ ಆಗಿದೆ. ಖಾಸಗಿ ವಾಹಿನಿ ರೂ. 3,269.4 ಕೋಟಿ ನೀಡಿ ಒಂದು ವರ್ಷದ ಪ್ರಸಾರದ ಹಕ್ಕನ್ನು ಪಡೆದುಕೊಂಡಿತ್ತು. ಇದರಿಂದ ಬಿಸಿಸಿಐಗೆ ಪ್ರತಿ ಪಂದ್ಯಕ್ಕೆ ಅಂದಾಜು ರೂ. 54.5 ಕೋಟಿ ಆದಾಯ ಹರಿದು ಬರುತ್ತಿತ್ತು. ಕೇವಲ 29 ಪಂದ್ಯಗಳು ನಡೆದಿದ್ದರಿಂದಾಗಿ ರೂ. 1580 ಕೋಟಿ ಬಿಸಿಸಿಐಗೆ ಸಿಗಲಿದೆ. ಇನ್ನುಳಿದ ರೂ. 1690 ಕೋಟಿ ಬರುವುದಿಲ್ಲ ಎನ್ನಲಾಗಿದೆ.
ಶೀರ್ಷಿಕೆ ಪ್ರಯೋಜಕತ್ವ ಪಡೆದಿದ್ದ ಮೊಬೈಲ್ ಕಂಪನಿ ವರ್ಷಕ್ಕೆ ರೂ. 440 ಕೋಟಿ ರೂ. ಬಿಸಿಸಿಐಗೆ ಕೊಡುವ ಒಪ್ಪಂದವಿತ್ತು. ಆದರೆ, ಸದ್ಯ ಅರ್ಧ ಹಣ ಮಾತ್ರ ಬರುವ ಸಾಧ್ಯತೆ ದೆ. ಅಲ್ಲದೇ, ಸಹ ಪ್ರಯೋಜಕತ್ವ ಪಡೆದುಕೊಂಡಿದ್ದ ಕಂಪನಿಗಳು ಕೂಡ ಅರ್ಧ ಹಣ ನೀಡಬಹುದು. ಇದರಿಂದಾಗಿ ಬಿಸಿಸಿಐಗೆ ಹೆಚ್ಚಿನ ನಷ್ಟವಾಗುವ ಭೀತಿ ಎದುರಾಗಿದೆ.