ವಿಜಯಸಾಕ್ಷಿ ಸುದ್ದಿ, ಗದಗ
ಗದಗ ಜಿಲ್ಲೆಯಲ್ಲಿ ಐಪಿಎಲ್ ಬೆಟ್ಟಿಂಗ್ ದಂದೆ ಜೋರಾಗಿದೆ. ದಿನವೂ ಸಣ್ಣ ಪುಟ್ಟ ಬುಕ್ಕಿಗಳಿಗೆ ಗಾಳ ಹಾಕಿ ಬಂಧಿಸುತ್ತಿದ್ದ ಪೊಲೀಸರು ಈಗ ಭಾರಿ ಕುಳಗಳು ಇರುವ ಬೆಟ್ಟಿಂಗ್ ಅಡ್ಡೆಯ ಮೇಲೆ ದಾಳಿ ಮಾಡಿದ್ದು ನಾಲ್ಕು ಜನ ವರ್ತಕರು, ಓರ್ವ ಫೋಟೋಗ್ರಾಫರ್ ಸೇರಿದಂತೆ 9 ಜನರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ, ಗದಗನ ದೊಡ್ಡ ಬುಕ್ಕಿ ಪರಾರಿಯಾಗಿದ್ದು ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ ರಸ್ತೆಯ ಕನ್ನಡ ಸಾಹಿತ್ಯ ಭವನದ ಹತ್ತಿರದ ಪರಿಸರ ಲೇವೋಟ್ ನಲ್ಲಿ ದೊಡ್ಡ ಮಟ್ಟದ ಐಪಿಎಲ್ ಬೆಟ್ಟಿಂಗ್ ದಂದೆ ನಡೆಯುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗ್ರಾಮೀಣ ಠಾಣೆಯ ಪಿಎಸ್ಐ ಅಜಿತಕುಮಾರ ಹೊಸಮನಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ.
ಇದನ್ನೂ ಓದಿ ಐಪಿಎಲ್ ಬೆಟ್ಟಿಂಗ್; ಬೆಟಗೇರಿಯ ತಿಪ್ಪಣಸಾ ಕಬಾಡಿ ಬಂಧನ
ಬಂಧಿತರು ಬುಧವಾರ ನಡೆದ ಸಿ ಎಸ್ ಕೆ ಹಾಗೂ ಎಸ್ ಆರ್ ಎಚ್ ನಡುವಿನ ಐಪಿಎಲ್ 20-20 ಪಂದ್ಯದಲ್ಲಿ ನೂರಕ್ಕೆ ಎರಡು ನೂರು ರೂಪಾಯಿ ಕೊಡುವುದಾಗಿ ಬೆಟ್ಟಿಂಗ್ ನಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಹುಲಕೋಟಿಯ ಕೆಚ್ ಬಿ ಕಾಲೋನಿಯ ಪ್ರಕಾಶ್ ವಿಶ್ವನಾಥಸಾ ಕಲಬುರ್ಗಿ, ಗದಗ ನಗರದ ಕಲಾಮಂದಿರ ರಸ್ತೆಯ ನಿವಾಸಿ ಶ್ರೀಕಾಂತ್ ಸಿದ್ದಲಿಂಗಪ್ಪ ಪೂಜಾರ, ಅಮರೇಶ್ವರ ನಗರದ ವೆಂಕಟೇಶ್ ದತ್ತೂಸಾ ಸಿದ್ಲಿಂಗ್, ಕುಷ್ಟಗಿ ಚಾಳ್ ನಿವಾಸಿ ಈರಪ್ಪ ಬೂದಪ್ಪ ಹನಮನಹಳ್ಳಿ, ಒಕ್ಕಲಗೇರಿ ಓಣಿಯ ಶಿವಶಂಕರ್ ರಾಜಶೇಖರ ಯಕಲಾಸಪೂರ, ಕೆ ಸಿ ರಾಣಿ ರಸ್ತೆಯ (ಲಿಂಬಣ್ಣವರ ಆಸ್ಪತ್ರೆ ಹತ್ತಿರ) ಬಸವರಾಜ್ ಗುಂಡಪ್ಪ ಕೌಡಿ, ಗಂಗಾಪೂರ ಪೇಟೆಯ ಮಲ್ಲೇಶ್ ಸಿದ್ದಪ್ಪ ಬಾರಕೇರ, ನಿಂಗಪ್ಪ ಭರಮಪ್ಪ ಮಡಿವಾಳರ, ಬೆಟಗೇರಿಯ ಕಬಾಡಿ ರಸ್ತೆಯ ತೆಗ್ಗಿನಪೇಟಿಯ ಪ್ರಮೋದ್ ಪ್ರಕಾಶ್ ಮಾನೇದ ಎಂದು ಗುರುತಿಸಲಾಗಿದೆ.
ಪ್ರಮುಖ ಬುಕ್ಕಿ ಎಸ್ ಎಮ್ ಕೃಷ್ಣಾ ನಗರದ ಅನಿಲ ಪರಸಪ್ಪ ಸಿದ್ದಮ್ಮನಹಳ್ಳಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂಧಿತರಿಂದ 24 ಸಾವಿರ ರೂಪಾಯಿ ನಗದು, ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ ಐಪಿಎಲ್ ಬೆಟ್ಟಿಂಗ್; ಶ್ರೀನಿವಾಸ, ಪ್ರದೀಪ್, ಸನಾವುಲ್ಲಾ ಸೇರಿದಂತೆ 7 ಜನರ ಬಂಧನ
ಆದರೆ ಹಲವು ಇಸ್ಪೀಟು ಪ್ರಕರಣಗಳಲ್ಲಿ ಅನಿಲ ಸಿದ್ದಮ್ಮನಹಳ್ಳಿ ಆರೋಪಿಯಾಗಿದ್ದು, ಕಳೆದ ವರ್ಷ ಬಿಂಕದಕಟ್ಟಿ ಬಳಿಯ ಅಂದರ್-ಬಾಹರ್ ಜೂಜಾಟದಲ್ಲಿ, ಮೂರು ತಿಂಗಳ ಹಿಂದೆ ಹೊಂಬಳ ರಸ್ತೆಯಲ್ಲಿ ನಡೆದ ಜೂಜಾಟದಲ್ಲಿ ಎಫ್ ಆಯ್ ಆರ್ ದಾಖಲಾಗಿದ್ವು, ಆದರೆ ಆ ಪ್ರಕರಣಗಳಲ್ಲೂ ಅನಿಲ ಸಿದ್ದಮ್ಮನಹಳ್ಳಿ ಪರಾರಿಯಾಗಿದ್ದ. ಈ ಪ್ರಕರಣದಲ್ಲೂ ಪರಾರಿಯಾಗಿದ್ದಾನೆ ಎಂದರೆ ಪರಾರಿಯಾಗವುದರಲ್ಲಿ ಚಾಣಾಕ್ಷತನ ತೋರುತ್ತಿದ್ದಾನೋ ಅಥವಾ ದಾಳಿ ಮಾಡುವ ಸಂದರ್ಭದಲ್ಲಿ ಕೆಲ ಪೊಲೀಸರೇ ಮಾಹಿತಿ ನೀಡಿ ಆತ ಪರಾರಿಯಾಗಲು ಸಹಾಯ ಮಾಡುತ್ತಿದ್ದಾರೋ ಅನ್ನೋ ಮಾತುಗಳು ಕೇಳಿ ಬಂದಿವಿ.
ಈ ಬೆಟ್ಟಿಂಗ್ ಪ್ರಕರಣದಲ್ಲೂ ಪರಾರಿಯಾಗಿದ್ದು, ಇದರಲ್ಲಿ 10 ನೇ ಆರೋಪಿಯನ್ನಾಗಿ ಮಾಡಿದ್ದು ಕಾಣದ ಕೈಗಳು ಕೆಲಸ ಮಾಡಿರುವ ಅನುಮಾನ ಮೂಡಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆಯ ಪೊಲೀಸರು ಪರಾರಿಯಾದ ಆರೋಪಿ ಅನಿಲ ಸಿದ್ದಮ್ಮನಹಳ್ಳಿ ಬಂಧನಕ್ಕೆ ಜಾಲ ಬೀಸಿದ್ದಾರೆ.