
ವಿಜಯಸಾಕ್ಷಿ ಸುದ್ದಿ, ಗದಗ
ಎಸ್ ಬಿಐ ಬ್ಯಾಂಕಿನ ಎಟಿಎಂನಲ್ಲಿ ಹರಿದ ನೋಟುಗಳು ಬರುತ್ತಿದ್ದು, ಗ್ರಾಮಸ್ಥರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಎಸ್ ಬಿಐ ಬ್ಯಾಂಕ್ ನ ಎಟಿಎಂನಲ್ಲಿ ಕಳೆದ ಒಂದು ತಿಂಗಳಿನಿಂದಲೂ ಹರಿದ ನೋಟುಗಳು ಬರುತ್ತಿವೆ.
ಗರಿಷ್ಠ ಮುಖಬೆಲೆಯ ನೋಟುಗಳು ಕೂಡ ಇದೇ ರೀತಿ ಹರಿದಿವೆ. ಇದರಿಂದಾಗಿ ಜನರು ಕಂಗಾಲಾಗಿದ್ದಾರೆ. ಪ್ರತಿ ಬಾರಿ ಹಣ ಡ್ರಾ ಮಾಡುವಾಗ ಒಂದು ಅಥವಾ ಎರಡು ಹರಿದ, ತೇಪೆ ಹಚ್ಚಿದ ನೋಟುಗಳು ಬರುತ್ತಿವೆ. ಇದರಿಂದಾಗಿ ಜನರು ಬೇಸರ ಆಕ್ರೋಶಗೊಂಡಿದ್ದಾರೆ.
ಬ್ಯಾಂಕಿಗೆ ಹೋಗಿ ಕ್ಯೂ ನಿಲ್ಲುವ ಬದಲಾಗಿ ಎಟಿಎಂಗೆ ಹೋಗಿ ಬೇಗನೆ ಹಣ ಪಡೆದರಾಯಿತು ಎಂದು ಜನರು ಎಟಿಎಂಗೆ ಹೋಗಿ ಹಣ ಪಡೆಯುತ್ತಿದ್ದರು. ಆದರೆ, ಅಲ್ಲಿ ಹರಿದ ನೋಟುಗಳು ಬರುತ್ತಿರುವುದರಿಂದ ಪುನಃ ಬ್ಯಾಂಕಿಗೆ ಹೋಗಿ ಕ್ಯೂ ನಿಲ್ಲುವ ಪರಿಸ್ಥಿತಿ ಬಂದೋದಗಿದೆ.
ಈ ಹರಿದ ನೋಟುಗಳ ಬದಲಾವಣೆಗಾಗಿ ಜನರು ಹತ್ತಾರು ಕಿ.ಮೀ ಕೂಡ ಸಂಚರಿಸಬೇಕು. ಹೀಗಾಗಿ ಜನರು ಸಾಕಷ್ಟು ಬಾರಿ ಬ್ಯಾಂಕ್ ನ ಸಿಬ್ಬಂದಿಗೆ ಹೇಳಿದರೂ ಅವರು ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಗ್ರಾಮೀಣ ಜನರಿಗಾಗುತ್ತಿರುವ ಈ ಸಮಸ್ಯೆಯನ್ನು ಕೂಡಲೇ ಸಂಬಂಧಿಸಿದವರು ಪರಿಹರಿಸಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.