*ಕೊರೊನಾ ರೂಪಾಂತರಿ ವೈರಸ್ ವಿರುದ್ಧ ಹೋರಾಟಕ್ಕೆ ಜಿಲ್ಲಾಡಳಿತ ಸನ್ನದ್ಧ
*100 ಹಾಸಿಗೆ ಸಾಮರ್ಥ್ಯದ ಅತ್ಯಾಧುನಿಕ ಸೌಲಭ್ಯವುಳ್ಳ ಆಸ್ಪತೆ ನಿರ್ಮಾಣ
*ವೈದ್ಯಕೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆನ್ನಲಾದ ವೈದ್ಯ ಸುಳ್ಳು ಹೇಳಿದ್ದೇಕೆ?
ದುರಗಪ್ಪ ಹೊಸಮನಿ
ವಿಜಯಸಾಕ್ಷಿ ವಿಶೇಷ, ಗದಗ:
ಐದಾರು ತಿಂಗಳಿನಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟು ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದ ರಾಜ್ಯದ ಜನರಿಗೆ ಕೊರೊನಾ ರೂಪಾಂತರಿ ತಳಿ ಡೆಲ್ಟಾ ಹಾಗೂ ಓಮಿಕ್ರಾನ್ ಭೀತಿ ಶುರುವಾಗಿದೆ. ಈ ಬೆನ್ನಲ್ಲೆ ಗದಗ ಜಿಲ್ಲಾಡಳಿತ ಡೆಲ್ಟಾ, ಓಮಿಕ್ರಾನ್ ಎದುರಿಸಲು ಸನ್ನದ್ಧಗೊಳ್ಳುತ್ತಿದೆ. ಇದಕ್ಕಾಗಿ ಜಿಮ್ಸ್ ಆವರಣದಲ್ಲಿ ನೂರು ಹಾಸಿಗೆಯ ಸಾಮರ್ಥ್ಯದ ಅತ್ಯಾಧುನಿಕ ಸೌಲಭ್ಯವುಳ್ಳ ಆಸ್ಪತ್ರೆಯೊಂದನ್ನು ನಿರ್ಮಿಸಿದೆ.
ಗದಗ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಾಣವಾಗಿರುವ ಅತ್ಯಾಧುನಿಕ ಮಾಡ್ಯುಲರ್ ಆಸ್ಪತ್ರೆ ಗದಗ ಜಿಲ್ಲೆ ಹೊರತುಪಡಿಸಿದರೆ ಮೈಸೂರಲ್ಲಿ ಮಾತ್ರವೇ ಇದೆ. ಕೊರೊನಾ ಒಂದು ಮತ್ತು ಎರಡನೇ ಅಲೆಗಳಿಂದ ಪಾಠ ಕಲಿತಿರುವ ಜಿಲ್ಲಾಡಳಿತ ಓಮಿಕ್ರಾನ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಭರ್ಜರಿ ತಯಾರಿ ನಡೆಸಿದೆ. ಜಿಮ್ಸ್ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಹಾಸಿಗೆಗಳು, ವೆಂಟಿಲೇಟರ್, ಆಕ್ಸಿಜನ್, ವೈದ್ಯರು ಹಾಗೂ ಸಿಬ್ಬಂದಿಯ ಕೊರತೆಯಾಗದಂತೆ ನಿಗಾ ವಹಿಸುತ್ತಿದೆ. ವೈದ್ಯರಿಗೆ ಕೋವಿಡ್ ಚಿಕಿತ್ಸೆ ಕುರಿತು ಸೂಕ್ತ ತರಬೇತಿ ನೀಡಿದೆ.
ಹೇಗಿದೆ ಸಿದ್ಧತೆ?:
ಜಿಮ್ಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್, ಆಕ್ಸಿಜನ್ ಸಾಂದ್ರಕ, ಆಕ್ಸಿಜನ್ ಬೆಡ್, ಲಿಕ್ವಿಡ್ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ನಿರ್ಮಿಸಿದೆ. ಆಯುಷ್ ಆಸ್ಪತ್ರೆಯ 93 ಸೇರಿದಂತೆ ಜಿಮ್ಸ್ ಆಸ್ಪತ್ರೆಯಲ್ಲಿ 500 ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. 100ಕ್ಕೂ ಅಧಿಕ ವೆಂಟಿಲೇಟರ್ ವ್ಯವಸ್ಥೆ ಮಾಡಿಕೊಂಡಿರುವ ಜಿಮ್ಸ್ ರಾಜ್ಯದಲ್ಲಿ ಮಕ್ಕಳಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರತ್ಯೇಕ ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಜಿಮ್ಸ್ ನಲ್ಲಿ ಒಟ್ಟು 200 ಸಿಲಿಂಡರ್, 75 ಆಕ್ಸಿಜನ್ ಸಾಂದ್ರಕ, 13 ಕೆಎಲ್, 20 ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಸಂಗ್ರಹಣಾ ಘಟಕಗಳಿವೆ ಎಂದು ಜಿಮ್ಸ್ ನಿರ್ದೇಶಕ ಡಾ| ಪಿ.ಎಸ್. ಭೂಸರೆಡ್ಡಿ ಹೇಳಿದರು.
ಮಾಡ್ಯುಲರ್ ಆಸ್ಪತ್ರೆಯ ವಿಶೇಷತೆ…
ಬೆಂಗಳೂರು ಮೂಲದ `ಯುನೈಟೆಡ್ ವೇ’ ಎಂಬ ಎನ್‌ಜಿಒ ಪ್ರಾಯೋಜಿತ ಮಾಡ್ಯುಲರ್ ಆಸ್ಪತ್ರೆ ನಿರ್ಮಾಣದ ಹೊಣೆಯನ್ನು ಚೆನ್ನೆöÊ ಮೂಲದ ಮಾಡ್ಯುಲಸ್ ಎಂಬ ಕಂಪನಿಗೆ ವಹಿಸಲಾಗಿದೆ. ಸಿದ್ಧ ಉಪಕರಣಗಳ ಮೂಲಕ ನೂರು ಹಾಸಿಗೆಯುಳ್ಳ ಅತ್ಯಾಧುನಿಕ ಸೌಲಭ್ಯದ ಆಸ್ಪತ್ರೆಯ ಕಾಮಗಾರಿ ಶೇ. 90ರಷ್ಟು ಮುಕ್ತಾಯಗೊಂಡಿದೆ. ಕಡಿಮೆ ಅವಧಿಯಲ್ಲಿ 10 ಹವಾನಿಯಂತ್ರಿತ ಕೊಠಡಿಗಳನ್ನು ನಿರ್ಮಿಸಿದೆ. ಪ್ರತಿಯೊಂದು ಕೊಠಡಿಯಲ್ಲೂ ಆಕ್ಸಿಜನ್ ಬೆಡ್ ಸೌಲಭ್ಯ ಕಲ್ಪಿಸಲಾಗಿದೆ. ಮಾಡ್ಯುಲರ್ ಆಸ್ಪತ್ರೆಯನ್ನು ಸಂಚಾರಿ ಘಟಕದಂತೆ ಸ್ಥಳಾಂತರಿಸಬಹುದಾಗಿದೆ.
ಜಿಲ್ಲೆಯ ವೈದ್ಯರೊಬ್ಬರಿಗೆ ಓಮಿಕ್ರಾನ್?
ನ.20ರಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ವೈದ್ಯಕೀಯ ಸಮ್ಮೇಳನದಲ್ಲಿ ಭಾಗವಹಿಸಿದ 250 ಜನರ ಪೈಕಿ ಸರ್ಕಾರಿ ವೈದ್ಯರೊಬ್ಬರಿಗೆ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ. ಅದರಂತೆ, ವೈದ್ಯಕೀಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು ಎನ್ನಲಾದ ಮುಂಡರಗಿ ತಾಲೂಕಿನ ವೈದ್ಯರೊಬ್ಬರಿಗೆ ಡಿ.1ರಂದು ಕೊರೊನಾ ಸೋಂಕು ದೃಢಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸೋಂಕು ದೃಢಪಡುವ ಮುನ್ನ ಅವರು ರೋಗಿಗಳ ತಪಾಸಣೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಹೀಗಾಗಿ ಆರೋಗ್ಯ ಇಲಾಖೆ ಸುಮಾರು 80 ಜನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಪರೀಕ್ಷೆಗೊಳಪಡಿಸಿದ್ದು, ಎಲ್ಲ ವರದಿಗಳೂ ನೆಗೆಟಿವ್ ಬಂದಿವೆ. ಆದರೆ, ವೈದ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ ಎಂದು ವೈದ್ಯಕೀಯ ಮೂಲಗಳೇ ತಿಳಿಸಿವೆ. ಹೀಗಿದ್ದಾಗ್ಯೂ ವೈದ್ಯರು ಸಮ್ಮೇಳನದಲ್ಲಿ ಭಾಗವಹಿಸಿಲ್ಲವೆಂದು ಆರೋಗ್ಯ ಇಲಾಖೆಗೆ ಸುಳ್ಳು ಮಾಹಿತಿ ನೀಡಿದ್ದೇಕೆ? ಎಂಬುದನ್ನು ಸ್ಪಷ್ಟಪಡಿಸಬೇಕಿದೆ.
ಓಮಿಕ್ರಾನ್ ಸೋಂಕು ಹಿನ್ನೆಲೆ ಜಿಲ್ಲೆಯ ತಾಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 315 ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಮಾಡಿಕೊಂಡಿದೆ. ಮುಂಜಾಗ್ರತವಾಗಿ ಕೋವಿಡ್‌ಗೆ ಸಂಬAಧಿಸಿದ ಔಷಧಿಗಳ ದಾಸ್ತಾನು ಮಾಡಲಾಗಿದೆ. ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಬಹಳಷ್ಟಿದ್ದು, ಯಾವುದೇ ಕೊರತೆ ಇಲ್ಲ. ಪ್ರತಿದಿನ 900 ಜನರ ಮಾದರಿ ಸಂಗ್ರಹಿಸಲಾಗುತ್ತಿದೆ. ಶೇ. 100ರಷ್ಟು ಮೊದಲನೇ ಹಾಗೂ ಶೇ. 63ರಷ್ಟು ಕೋವಿಡ್ ಎರಡನೇ ಹಂತದ ಲಸಿಕೆ ನೀಡಲಾಗಿದೆ. ಜನರಿಗೆ ಕೋವಿಡ್ ಸೋಂಕು ಹಾಗೂ ಲಸಿಕೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಡಾ|ಸತೀಶ್ ಬಸರಿಗಿಡದ, ಡಿಎಚ್ಒ
ಕೊರೊನಾ ಸೋಂಕು ದೃಢಪಟ್ಟಿರುವ ಮುಂಡರಗಿ ವೈದ್ಯರು ವೈದ್ಯಕೀಯ ಸಮ್ಮೇಳನದಲ್ಲಿ ಭಾಗವಹಿಸಿಲ್ಲ. ಆದರೆ, ಬೇರೆ ವೈಯಕ್ತಿಕ ಕಾರ್ಯಕ್ರಮಕ್ಕೆ ಹೋಗಿದ್ದೆ ಎಂದು ಹೇಳಿದ್ದಾರೆ. ವೈದ್ಯರ ಸಂಪರ್ಕಕ್ಕೆ ಬಂದಿರುವ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿರನ್ನು ಪತ್ತೆ ಮಾಡಿದ್ದು, ಅವರಲ್ಲಿ ಯಾವುದೇ ಸೋಂಕು ಕಂಡು ಬಂದಿಲ್ಲ. ಸೋಂಕಿತರ ಸಿಟಿ ವ್ಯಾಲ್ಯೂ ಶೇ. 25ಕ್ಕಿಂತ ಕಡಿಮೆ ಇದ್ದರೆ ಮಾತ್ರವೇ ಓಮಿಕ್ರಾನ್ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಆದರೆ, ಗದಗ ಜಿಲ್ಲೆಯಿಂದ ಓಮಿಕ್ರಾನ್ ಪರೀಕ್ಷೆಗೆ ಯಾವುದೇ ಮಾದರಿಗಳನ್ನು ಕಳುಹಿಸಿಲ್ಲ.
ಡಾ| ಜಗದೀಶ್ ನುಚ್ಚಿನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ