ವಿಜಯಸಾಕ್ಷಿ ಸುದ್ದಿ, ಕಂಪ್ಲಿ
ಹಾವು ಕಂಡರೆ ಸಾಕು ಭಯಪಡುವದುಂಟು. ಆದರೆ, ವ್ಯಕ್ತಿಯೊಬ್ಬ ತನಗೆ ಕಚ್ಚಿದ ನಾಗರ ಹಾವನ್ನೇ ಕೈಯಲ್ಲಿ ಹಿಡಿದು, ಆಸ್ಪತ್ರೆಗೆ ಬಂದ ಅಚ್ಚರಿಯ ಘಟನೆ ಕಂಪ್ಲಿ ತಾಲೂಕಿನಲ್ಲಿ ನಡೆದಿದೆ. ಹಾವು ಅಂದರೆ ಸಾಕು, ಮಕ್ಕಳಿಂದ ಹಿಡಿದು ದೊಡ್ಡವರು ಸಹ ಹೆದರುತ್ತಾರೆ. ಇಂತಹ ಸಂದರ್ಭದಲ್ಲಿ ತಾಲೂಕಿನ ಮೆಟ್ಟಿ ಗ್ರಾಪಂ ವ್ಯಾಪ್ತಿಯ ಉಪ್ಪಾರಹಳ್ಳಿ ಗ್ರಾಮದ ಕಾಡಪ್ಪ ಎಂಬ ವ್ಯಕ್ತಿ ತನಗೆ ಕಚ್ಚಿದ ಹಾವನ್ನೇ ಕೈಯಲ್ಲಿ ಹಿಡಿದುಕೊಂಡು ಚಿಕಿತ್ಸೆಗಾಗಿ ಕಂಪ್ಲಿಯ ಸರ್ಕಾರಿ ಆಸ್ಪತ್ರೆಗೆ ಬಂದ ವಿಚಿತ್ರ ಘಟನೆ ನಡೆದಿದೆ.
ಹಾವು ಕಚ್ಚಿಸಿಕೊಂಡ ಕಾಡಪ್ಪ ಹಾವಿನ ತೆಲೆ ಹಿಡಿದುಕೊಂದು ಆಸ್ಪತ್ರೆಗೆ ಧಾವಿಸಿದ್ದು, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಹಾಗೂ ಜನರು ಹೌಹಾರಿದ್ದಾರೆ. ನಂತರ ಪ್ರಥಮ ಚಿಕಿತ್ಸೆ ನೀಡಿ, ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿದ್ದಾರೆ. ಈಗ ಕಾಡಪ್ಪ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹಾವು ತನಗೆ ಕಚ್ಚಿದ್ದರಿಂದ ಸಿಟ್ಟಿಗೆದ್ದ ಕಾಡಪ್ಪ, ಅಲ್ಲೇ ಪಕ್ಕದಲ್ಲಿದ್ದ ಹಾವಿನ ತಲೆಗೆ ಕೈಹಾಕಿ ಹಿಡಿದುಕೊಂಡಿದ್ದಾರೆ. ಅಲ್ಲದೆ, ಆಸ್ಪತ್ರೆಗೆ ತೆರಳಲು ತಾತ್ಸಾರ ತೋರಿದ ಕಾಡಪ್ಪನಿಗೆ ಗ್ರಾಮದ ಕೆಲವರು ಬುದ್ಧಿ ಹೇಳಿ ಬೈಕ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಸಾಮಾನ್ಯವಾಗಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಕಂಡಿದ್ದ ವೈದ್ಯರು, ಜೀವಂತ ಹಾವನ್ನೇ ಕೈಯಲ್ಲಿ ಹಿಡಿದುಕೊಂಡು ಆಸ್ಪತ್ರೆಗೆ ಬಂದರೆ ಏನಾಗಬೇಡ ಹೇಳಿ? ಇಂಥದ್ದೇ ಪ್ರಸಂಗ ಕಂಪ್ಲಿಯಲ್ಲಿ ನಡೆದಿದೆ.
ಹಾವು ಕಚ್ಚಿದ್ದರಿಂದ ಉಪ್ಪಾರಹಳ್ಳಿಯ ಕಾಡಪ್ಪ ತನ್ನ ಕೈಯಲ್ಲಿ ಹಾವು ಹಿಡಿದುಕೊಂಡು ಚಿಕಿತ್ಸೆ ನೀಡುವಂತೆ ಆಸ್ಪತ್ರೆಗೆ ಬಂದಾಗ ವೈದ್ಯರು ಹೌಹಾರಿದ್ದಾರೆ. ಅಲ್ಲದೆ, ಆಸ್ಪತ್ರೆಗೆ ಆಗಮಿಸಿದ್ದ ಜನರೂ ಹೆದರಿಕೊಂಡು ಅಕ್ಕಪಕ್ಕ ಓಡಿದ್ದಾರೆ. ಕೆಲವರು ಹಾವು ಹಿಡಿದುಕೊಂಡಾತನನ್ನು ನೋಡಲು ಮುಗಿಬಿದ್ದಿದ್ದಾರೆ. ಕಾಡಪ್ಪ ಹಿಡಿದುಕೊಂಡಿದ್ದ ಹಾವನ್ನು ಕೊನೆಗೆ ಆಸ್ಪತ್ರೆ ಆವರಣದ ಪಕ್ಕದಲ್ಲಿ ಬಿಟ್ಟುಬಂದ ನಂತರ ಆತನಿಗೆ ವೈದ್ಯರು ಚಿಕಿತ್ಸೆ ನೀಡಿ ನಂತರ ಬಳ್ಳಾರಿ ವಿಮ್ಸ್‌ಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿದ್ದು ಗುಣಮುಖವಾಗುತ್ತಿದ್ದಾನೆಂದು ತಿಳಿದು ಬಂದಿದೆ.