ವಿಜಯಸಾಕ್ಷಿ ಸುದ್ದಿ, ಮುಂಡರಗಿ
ಗದಗ ಜಿಲ್ಲೆಯಲ್ಲಿ ಸದ್ಯಕ್ಕೆ ಪ್ರವಾಸಿಗರಿಗೆ ಕಪ್ಪತಗುಡ್ಡ ರಮಣೀಯ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಬೆಳ್ಲಂಬೆಳಿಗ್ಗೆ ಕಪ್ಪತಗುಡ್ಡ ನೋಡುವುದಕ್ಕೆ ಎರಡು ಕಣ್ಣು ಸಾಲದು. ಅಷ್ಟೊಂದು ಸುಂದರವಾಗಿ ಕಾಣುತ್ತಿದೆ. ಶುದ್ಧ ಗಾಳಿ ಸವಿಯಲು, ಚಲಿಸುವ ಮೋಡಗಳು ಕಣ್ಣು ಮುಂದೆ ಹೋಗುವ ದೃಶ್ಯಗಳನ್ನುಂತೂ ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಗದಗ ಜಿಲ್ಲೆಯ ಜನರಷ್ಟೇ ಅಲ್ಲ, ಅಕ್ಕಪಕ್ಕದ ಜಿಲ್ಲೆಗಳಿಂದಲೂ ಜನ ಹರಿದು ಬರುತ್ತದೆ. ವೀಕೆಂಡ್ ದಿನವನ್ನು ಕಳೆಯಲು ಮಕ್ಕಳ ಸಮೇತ ಆಗಮಿಸುತ್ತಾರೆ.
ಆದರೆ ಇವತ್ತು ಪ್ರವಾಸಿಗರಿಗೆ ನಿರಾಶೆ ಕಾದಿದೆ. ಯಾಕೆಂದರೆ ಕಪ್ಪತಗುಡ್ಡಕ್ಕೆ ಬೇಕಾಬಿಟ್ಟಿ ವಾಹನಗಳ ತಡೆಗೆ ಅರಣ್ಯ ಇಲಾಖೆ ಚೆಕ್ ಪೋಸ್ಟ್ ನಿರ್ಮಿಸಿದೆ. ಅದೂ ಐದು ಕಿಲೋಮೀಟರ್ ದೂರದಲ್ಲಿ. ಐದು ಕಿಲೋಮೀಟರ್ ದೂರದಲ್ಲಿ ವಾಹನ ನಿಲ್ಲಿಸಿ, ಕಪ್ಪತಗುಡ್ಡದ ಮೇಲೆ ಹತ್ತಲು ಕಾಲ್ನಡಿಗೆಯಲ್ಲಿ ಹೋಗಬೇಕು. ಇದು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಅಲ್ಲಲ್ಲಿ ಈ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಪ್ರವಾಸಿಗರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.
ಕಳೆದ ಎರಡು ತಿಂಗಳನಿಂದ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಹಾಗೆ ಬಂದವರು ಕಪ್ಪತಗುಡ್ಡದಲ್ಲಿ ಬೇಕಾಬಿಟ್ಟಿಯಾಗಿ ತ್ಯಾಜ್ಯ ವಸ್ತುಗಳ ಬೀಸಾಕುವುದು, ಗಲೀಜು ಮಾಡುವುದು ನಡೆದಿತ್ತು. ಇದರಿಂದಾಗಿ ಪರಿಸರಕ್ಕೆ ಹಾನಿಯಾಗುವ ಸಂಭವ ಇತ್ತು. ಇದನ್ನು ತಡೆಯಲು ಅರಣ್ಯ ಇಲಾಖೆ ನಿನ್ನೆಯಿಂದ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಯಾವುದೇ ವಾಹನಗಳು ಗುಡ್ಡದ ಮೇಲೆ ಹೋಗದಂತೆ, ಪ್ಲಾಸ್ಟಿಕ್, ಇನ್ನಿತರ ವಸ್ತುಗಳನ್ನು ತಗೆದುಕೊಂಡು ಹೋಗದಂತೆ ತಪಾಸಣೆ ಮಾಡಿ ಬಿಡಲಾಗುತ್ತಿದೆ.
ವೀಕೆಂಡ್ ಮೋಜು- ಮಸ್ತಿ ಮಾಡುವ ಕೆಲವರಿಗೆ ಇದರಿಂದ ನಿರಾಶೆಯಾದಂತಾಗಿದೆ. ಈ ಕುರಿತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ಅನಾವಶ್ಯಕ ಜನದಟ್ಟಣೆ ತಡೆಯಲು, ಕಪ್ಪತಗುಡ್ಡ ನೋಡಲು ಬರುವ ಕೆಲವರು, ಮುಜಗುರ ತರುವ ಸನ್ನಿವೇಶ, ಮೋಜು-ಮಸ್ತಿ ಮಾಡುತ್ತಿದ್ದರು. ಹೀಗಾಗಿಯೇ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ ಎಂದರು.