ಕಪ್ಪತಗುಡ್ಡದ ಬೆಂಕಿ ಹಿಂದೆ ಗಣಿಗಾರಿಕೆ ಹುನ್ನಾರ? ಸ್ಥಳೀಯರಿಗೆ ಆಮಿಷವೊಡ್ಡಿ ಬೆಂಕಿ..!

0
Spread the love

*ಗದಗ ತೋಂಟದ ಡಾ| ಸಿದ್ಧರಾಮ ಸ್ವಾಮೀಜಿ ಕಳವಳ
*ಗಣಿಗಾರಿಕೆಗೆ ಪ್ರಸ್ತಾವನೆ ಇಲ್ಲ: ಅನಂತ ಹೆಗಡೆ ಆಶೀಸರ್

Advertisement

ವಿಜಯಸಾಕ್ಷಿ ಸುದ್ದಿ, ಗದಗ:
ನಾಲ್ಕೈದು ದಿನಗಳ ಹಿಂದೆ ಕಪ್ಪತಗುಡ್ಡಕ್ಕೆ ಬೆಂಕಿ ಬಿದ್ದು, ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗಿತ್ತು. ಸದ್ಯ ಬೆಂಕಿಯ ಘಟನೆಯ ಹಿಂದೆ ಗಣಿ ಕುಳಗಳ ಕೈವಾಡವಿದೆಯೇ ಎಂಬ ಅನುಮಾನ ದಟ್ಟವಾಗಿದ್ದು, ಜಿಲ್ಲೆಯ ವನ್ಯಜೀವಿ ಧಾಮ ಇದೀಗ ಅಳವಿನ ಅಂಚಿಗೆ ಬಂದು ನಿಂತಿದೆ ಎಂದು ತೋಂಟದ ಸಿದ್ಧರಾಮ ಶ್ರೀಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಗುರುವಾರ (ಮಾ.೪) ಜಿಲ್ಲೆಯಲ್ಲಿ ರಾಜ್ಯ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ್ ಪ್ರವಾಸ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ನಗರದ ತೋಂಟದಾರ್ಯ ಮಠಕ್ಕೆ ಭೇಟಿ ನೀಡಿ ತೋಂಟದ ಸಿದ್ಧರಾಮ ಶ್ರೀಗಳೊಂದಿಗೆ ಕಪ್ಪತಗುಡ್ಡ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದರು.

ಈ ವೇಳೆ ಕಪ್ಪತಗುಡ್ಡಕ್ಕೆ ಪದೇ ಪದೇ ಬೆಂಕಿ ಬೀಳುತ್ತಿರುವ ಕುರಿತು ಸಿದ್ಧರಾಮ ಶ್ರೀಗಳು ಮಾತನಾಡಿ, ನಿರಂತರ ಹೋರಾಟದ ಫಲವಾಗಿ ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮವೆಂದು ಘೋಷಣೆ ಮಾಡಿದೆ. ಆದರೆ ಈ ಬಾರಿ ಬೇಸಿಗೆ ಆರಂಭದಲ್ಲಿ ಕಪ್ಪತಗುಡಕ್ಕೆ ಭಾರೀ ಪ್ರಮಾಣದಲ್ಲಿ ಬೆಂಕಿ ಹಚ್ಚಲಾಗುತ್ತಿದೆ. ಒಂದು ವಾರದಲ್ಲಿ ಅಪಾರ ಪ್ರಮಾಣದ ಸಸ್ಯ ಸಂಪತ್ತು ಸುಟ್ಟು ಕರಕಲಾಗಿದೆ.

ಈ ಬೆಂಕಿ ಹಚ್ಚುವ ಕೆಲಸದ ಹಿಂದೆ ಕಾಣದ ಕೈಗಳ ಕೈವಾಡ ಇದೆ ಎಂಬ ಅನುಮಾನವಿದೆ. ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡಬೇಕು ಎನ್ನುವ ಮನೋಭಾವನೆಯಿಂದ, ಸ್ಥಳೀಯರಿಗೆ ಆಸೆ ಆಮಿಷಗಳನ್ನು ಒಡ್ಡಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆಂದು ಸಂಶಯ ವ್ಯಕ್ತಪಡಿಸಿದ್ದರು.

ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ್ ಮಾತನಾಡಿ, ಕಪ್ಪತ್ತಗುಡ್ಡಕ್ಕೆ ಕಂಟಕ ಬಂದಾಗಲೆಲ್ಲ ತೋಂಟದಾರ್ಯ ಶ್ರೀಗಳು ನಿರಂತರವಾಗಿ ಹೋರಾಟ ಮಾಡಿದ್ದಾರೆ. ಇದೀಗ ಪುನಃ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡಬೇಕೆಂಬ ಹುನ್ನಾರ ನಡೆಯುತ್ತಿದೆ. ಹೀಗಾಗಿ ಜನಶಕ್ತಿ ಒಂದಾಗಿ ಸಸ್ಯ ಸಂಪತ್ತು ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಎರಡೆರಡು ಕಡೆ ಬೆಂಕಿ

ಮುಂಡರಗಿ ತಾಲೂಕಿನ ಕಪ್ಪತಗುಡ್ಡದ ವ್ಯಾಪ್ತಿಯ ಡೋಣಿ ಗ್ರಾಮದ ಬಳಿ ಕಳೆದ ರವಿವಾರ (ಫೆ.೨೮) ಬೆಂಕಿ ಕಾಣಿಸಿಕೊಂಡಿತ್ತು. ಫೆ. ೨೭ರಂದು ಬಾಗೇವಾಡಿ, ಕೆಲೂರು ಬಳಿಯ ಕಪ್ಪತಗುಡ್ಡಕ್ಕೆ ಬೆಂಕಿ ಬಿದ್ದು ಸುಮಾರು ೫೦ ಹೆಕ್ಟೆರ್ ಪ್ರದೇಶದಷ್ಟು ಅರಣ್ಯ ಸಂಪತ್ತು ಸುಟ್ಟು ಕರಕಲಾಗಿತ್ತು.

ಭಗವಂತ ಸದ್ಭುದ್ಧಿ ಕೊಡಲಿ…

ಜನರ ಹಿತವನ್ನು ಕಾಪಾಡಬೇಕಾದವರೇ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಮಾಡಬೇಕು ಎಂದು ಯೋಜನೆ ರೂಪಿಸುತ್ತಿರುವುದು ಖಂಡನೀಯ. ಹೀಗಾಗಿ ಭಗವಂತನೇ ಜನಪ್ರತಿನಿಧಿಗಳಿಗೆ ಒಳ್ಳೆಯ ಸದ್ಭುದ್ಧಿ ಕೊಡಬೇಕು ಅಂತಾ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಧ್ಯಮಗಳ ಮುಂದೆ ತೋಂಟದ ಸಿದ್ಧರಾಮ ಶ್ರೀಗಳು ಕಳವಳ ವ್ಯಕ್ತಪಡಿಸಿದರು.

ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡುವ ಕುರಿತು ನಮ್ಮಲ್ಲಿ ಯಾವುದೇ ಪ್ರಸ್ತಾವನೆ ಇಲ್ಲ. ಆದರೆ, ಕಪ್ಪತ್ತಗುಡ್ಡಕ್ಕೆ ಯಾರು ಬೆಂಕಿ ಹಚ್ಚುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು. ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ಮಾಡಿಕೊಡಬಾರದು ಎಂದು ಸರಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ.

ಅನಂತ ಹೆಗಡೆ ಆಶೀಸರ್, ಅಧ್ಯಕ್ಷರು, ರಾಜ್ಯ ಜೀವ ವೈವಿಧ್ಯ ಮಂಡಳಿ ಬೆಂಗಳೂರು

Spread the love

LEAVE A REPLY

Please enter your comment!
Please enter your name here