ವಿಜಯಸಾಕ್ಷಿ ಸುದ್ದಿ, ಗದಗ
ಗದಗ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ಸಿಬ್ಬಂದಿಗಳು ಜು.11 ರಿಂದ ಜು.16 ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಮೋಟಾರು ವಾಹನ ನಿಯಮ ಉಲ್ಲಂಘಿಸಿದ ಒಟ್ಟು 158 ವಾಹನಗಳ ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡು ನಾಶಪಡಿಸಲಾಗಿದೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಕಳೆದ ವರ್ಷವೂ ಇದೇ ರೀತಿಯ ಕಾರ್ಯಾಚರಣೆ ನಡೆಸಲಾಗಿತ್ತು. ಇದಾದ ಬಳಿಕವೂ ದೋಷಪೂರಿತ ಸೈಲೆನ್ಸರ್‌ಗಳ ಬಳಕೆ ಕುರಿತು ಹಲವು ದೂರುಗಳು ಬಂದಿದ್ದವು.
ಶಬ್ದ ನಿಷೇಧಿತ ಪ್ರದೇಶದಲ್ಲಿ ಅತಿಯಾದ ಕರ್ಕಶ ಶಬ್ದ ಮಾಡಿದ ದ್ವಿ ಚಕ್ರವಾಹನ ಸ್ಥಳೀಯ ನಿವಾಸಿಗಳು ಸೇರಿದಂತೆ ಹಲವು ಮಂದಿ ಸ್ಥಳೀಯರು ಕರ್ಕಶ ಶಬ್ದ ಸೈಲೆನ್ಸರ್‌ಗಳ ನಿರಂತರ ಬಳಕೆಯ ಬಗ್ಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಂಡಿದ್ದು ಸೈಲೆನ್ಸರ್‌ಗಳನ್ನು ಅಳತೆ ಮಾಡಿ ವಾಹನ ಸವಾರರಿಗೆ ದಂಡ ವಿಧಿಸಿದ್ದೇವೆ. ಮುಂದಿನ ದಿನಗಳಲ್ಲಿಯೂ ಈ ಕಾರ್ಯಾಚರಣೆ ಮುಂದುವರಿಯುತ್ತದೆ. ಯಾವುದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಮಗೆ ದೂರುಗಳು ಬಂದರೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ನಾವು ಕರ್ಕಶ ಶಬ್ದ ಮಾಡುವ ದೋಷಪೂರಿತ ಸೈಲೆನ್ಸರ್ ತಯಾರಕರು ಮತ್ತು ಸ್ಥಳೀಯವಾಗಿ ಅವುಗಳನ್ನು ಅಳವಡಿಸುವಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
80 ಡೆಸಿಬಲ್‌ನ ಮಿತಿಯನ್ನು ದಾಟುವ ಯಾವುದೇ ಸೈಲೆನ್ಸರ್‌ಗಳನ್ನು ದೋಷಯುಕ್ತ ಸೈಲೆನ್ಸರ್‌ಗಳು ಎಂದು ಗುರುತಿಸಲಾಗುತ್ತದೆ. ವಶಪಡಿಸಿಕೊಂಡ ೧೫೮ ಸೈಲೆನ್ಸರ್‌ಗಳನ್ನು ಜೆಸಿಬಿ ಬಳಸಿ ನಾಶಪಡಿಸಲಾಯಿತು.
ಇದೇ ವೇಳೆ ಗದಗ ಠಾಣೆಯ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.