ವಿಜಯಸಾಕ್ಷಿ ಸುದ್ದಿ, ಗದಗ
ಆರನೇ ವೇತನ ಆಯೋಗ ಜಾರಿ ಮಾಡುವಂತೆ ರಾಜ್ಯ ಸಾರಿಗೆ ಸಂಸ್ಥೆಯ ನೌಕರರು ಕಳೆದೆರಡು ದಿನಗಳಿಂದ ಕರ್ತವ್ಯಕ್ಕೆ ಹಾಜರಾಗದೇ ಬಸ್ ಬಂದ್ ಮಾಡಿ ಮುಷ್ಕರ ನಡೆಸುತ್ತಿದ್ದಾರೆ.
ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗಳಿಗೆ ಹಾಜರಾಗುವಂತೆ ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ, ಕೆಲವು ಕಡೆ ಕೆಲವರಿಗೆ ನೊಟಿಸ್ ಸಹಿತ ನೀಡಿದೆ.
ಈ ಮಧ್ಯೆ ಸಾರಿಗೆ ಸಂಸ್ಥೆಯ ನೌಕರನೊಬ್ಬನಿಗೆ ಮುಷ್ಕರದ ನಡುವೆಯೂ ಕರ್ತವ್ಯಕ್ಕೆ ಹಾಜರಾಗುವಂತೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಒತ್ತಡ ಹಾಕಿದ್ದಕ್ಕೆ ಮನನೊಂದು ಚಾಲಕ/ನಿರ್ವಾಹಕ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುರುವಾರ(ಏ.೮) ಗದಗನಲ್ಲಿ ನಡೆದಿದೆ.
ಜಿಲ್ಲೆಯ ಕದಡಿ ಗ್ರಾಮದ 48 ವರ್ಷದ ವಸಂತ ರಾಮದುರ್ಗ ಎಂಬ ಚಾಲಕ/ ನಿರ್ವಾಹಕ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರು ಗದಗ ಘಟಕ ಸಿಬ್ಬಂದಿ ಜೊತೆಗೆ ಜಿಲ್ಲೆ ಸಾರಿಗೆ ನೌಕರರ ಸಂಘದ ಮುಖ್ಯಸ್ಥರಾಗಿದ್ದು, ನಗರದ ಹುಡ್ಕೋ ಕಾಲನಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ.
ಮುಷ್ಕರ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ವಸಂತ ಅವರಿಗೆ ಹಿರಿಯ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ಮೇಲಿಂದ ಮೇಲೆ ಒತ್ತಡ ಹೇರಿದ್ದಾರೆ. ಇಷ್ಟಕ್ಕೆ ಮನನೊಂದ ಸಿಬ್ಬಂದಿ ಡಿಪೋ ಬಳಿಯೇ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ವಸಂತ ಸದ್ಯ ಮಾತನಾಡದ ಸ್ಥಿತಿಯಲ್ಲಿರುವ ಅವರು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಮುಷ್ಕರದ ಎರಡನೇ ದಿನವಾದ ಗುರುವಾರದಂದು ಕೆಲವು ಬಸ್’ಗಳು ಸಂಚಾರ ನಡೆಸಿವೆ. ಇದರಿಂದ ಆರನೇ ವೇತನ ಆಯೋಗ ಜಾರಿಯಾಗುವುದಿಲ್ಲ. ನಮ್ಮ ಬೇಡಿಕೆಗಳು ಇಡೇರುವುದಿಲ್ಲ. ಪುನಃ ಸಾಲದ ಸುಳಿಗೆ ಸಿಲುಕುವುದು ತಪ್ಪುವುದಿಲ್ಲ. ಹೀಗಾಗಿ ಹೋರಾಟ ಮಾಡಿಯೂ ವ್ಯರ್ಥವಾಯಿತಲ್ಲ ಅಂತಾ ಮನನೊಂದಿದ್ದಾರೆ ಎಂದು ವಸಂತ ಅವರ ಮಗ ಬಸವರಾಜ್ ತಿಳಿಸಿದ್ದಾರೆ.
ಇನ್ನು ಜೀವನದಲ್ಲಿ ಜಿಗುಪ್ಸೆಗೊಂಡಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಸಹದ್ಯೋಗಿಗಳಿಗೆ ಹೇಳಿ ವಿಷ ಸೇವಿಸಿದ್ದಾರೆ ಎನ್ನಲಾಗಿದೆ.