ವಿಜಯಸಾಕ್ಷಿ ಸುದ್ದಿ, ಗದಗ:

‘ಗದಗ-ಬೆಟಗೇರಿ ಅವಳಿ ನಗರದ ಜನರಿಗೆ ಕಾಂಗ್ರೆಸ್ ನವರು ಪ್ರತಿ ಬಾರಿ ಸುಳ್ಳು ಹೇಳುತ್ತಾ ಬಂದಿದ್ದಾರೆ. ಇಲ್ಲಿನ ಜನಕ್ಕೆ ಕಾಂಗ್ರೆಸ್ ನಲ್ಲಿ ಎಚ್.ಕೆ.ಪಾಟೀಲ್ ಹಾಗೂ ಡಿ.ಆರ್.ಪಾಟೀಲ್ ಅವರ ಹೆಸರು ಬಿಟ್ಟು ಮತ್ತೇನು ಗೊತ್ತಿಲ್ಲ. ಇಷ್ಟು ವರ್ಷ ಅವರು ಹೇಳಿದ್ದನ್ನೆಲ್ಲಾ ಕೇಳಿಕೊಂಡು ಬಂದಿದ್ದೀರಾ. ಆದರೆ, ಈ ಬಾರಿ ಬದಲಾವಣೆ ಆಗಬೇಕು’ ಎಂದು ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಹೇಳಿದರು.
ಶುಕ್ರವಾರ ಅವಳಿ ನಗರದ 1ನೇ ವಾರ್ಡ್ ಅಭ್ಯರ್ಥಿ ಸೈನಾಜಬಿ ಶಾಮೀದ್ ನರಗುಂದ ಹಾಗೂ 2ನೇ ವಾರ್ಡ್ ಅಭ್ಯರ್ಥಿ ರಾಜೇಶ್ ಮುತಗಾರ ಪರವಾಗಿ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿ ಅವರು ಮಾತನಾಡಿದರು.
‘ನಗರದಲ್ಲಿ ಕಾಂಗ್ರೆಸ್ ನವರು ನೀರಿನ ಸಮಸ್ಯೆಯನ್ನು ಬಗೆಹರಿಸುವುದಿಲ್ಲ. ಕಳೆದ 50 ವರ್ಷಗಳಿಂದ ನೀರು, ಚರಂಡಿ, ವಿದ್ಯುತ್ ದೀಪಗಳ ಸಮಸ್ಯೆಗಳನ್ನೇ ಕೇಳುತ್ತಾ ಬಂದಿದ್ದೀರಿ. ಹೀಗಾಗಿ ಮತದಾರರು ಬದಲಾಗಬೇಕು. ನಗರದಲ್ಲಿನ ಸಮಸ್ಯೆಗಳ ಬಗ್ಗೆ ಸಚಿವರಾದ ಸಿ.ಸಿ.ಪಾಟೀಲ ಅವರು ಮುತುವರ್ಜಿ ವಹಿಸಿದ್ದು, ಈ ಕುರಿತು ಸಭೆ ನಡೆಸಿದ್ದಾರೆ. ಅಲ್ಲದೇ, ನಗರದಲ್ಲಿರುವ ವಸತಿ ರಹಿತರನ್ನು ಪಟ್ಟಿ ಮಾಡಿಕೊಟ್ಟಲ್ಲಿ ಕೆಲವೇ ತಿಂಗಳುಗಳಲ್ಲಿ ಮನೆ ಮಂಜೂರು ಮಾಡಿಸುವುದಾಗಿ ಹೇಳಿದ್ದಾರೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ರಾಜು ಕುರುಡಗಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.