ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಕಾಂಗ್ರೆಸ್‌ನಲ್ಲಿ ಮೂಲ, ವಲಸಿಗ ಎಂಬ ಬೇಧ ಇಲ್ಲ. ಅದೇನಿದ್ದರೂ ಬಿಜೆಪಿಗೆ ಸೀಮಿತ. ಬಿಜೆಪಿಯಲ್ಲಿ ಈಗಾಗಲೇ ಸಿಎಂ ಗದ್ದುಗೆಗೆ ಗುದ್ದಾಟ ಆರಂಭ ಆಗಿದೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.
ಕೊಪ್ಪಳದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ, ಹಾದಿ ಬೀದಿಯಲ್ಲಿ ಸಿಎಂ ಯಾರಾಗ್ತಾರೆ ಎಂದು ಹೇಳುವುದು ಮತ್ತು ಚರ್ಚಿಸುವುದು ಸರಿಯಲ್ಲ. ನಮ್ಮಲ್ಲೂ ಸಿಎಂ ಆಕಾಂಕ್ಷಿಗಳು ಸಾಕಷ್ಟು ಜನ ಇದ್ದಾರೆ. ಅದಕ್ಕೂ ಮೊದಲು ಚುನಾವಣೆ ನಡೆಯಬೇಕು, ಪಕ್ಷ ಅಧಿಕಾರಕ್ಕೆ ಬರಬೇಕು, ಆನಂತರ ಶಾಸಕಾಂಗ ಸಭೆಯಲ್ಲಿ ಪಕ್ಷದ ಶಾಸಕರು ಸೇರಿ ಸಿಎಂ ಯಾರು ಎಂಬುದನ್ನು ನಿರ್ಧರಿಸುತ್ತಾರೆ. ಎಲ್ಲಕ್ಕಿಂತ ಮೊದಲು ರಾಜ್ಯದಲ್ಲಿರಯವ ಬಿಜೆಪಿ ಸರಕಾರವನ್ನು ಕಿತ್ತೆಸೆಯಬೇಕು ಎಂದರು.
ಕಾಂಗ್ರೆಸ್‌ನಲ್ಲಿ ನಾಯಕರಿಗೇನು ಕೊರತೆ ಇಲ್ಲ. ಸಮಯ, ಸಂದರ್ಭ ಬಂದಾಗ ಪಕ್ಷದಲ್ಲಿ ಎಲ್ಲರಿಗೂ ಅಧಿಕಾರ ಸಿಗುತ್ತೆ. ಕಾಂಗ್ರೆಸ್ ಸಾಮಾಜಿಕ ನ್ಯಾಯ ತತ್ವದಡಿ ಬೆಳೆದು ಬಂದಿರುವ ಪಕ್ಷ. ಬಿಜೆಪಿಯಂತೆ ಜಾತಿ-ಧರ್ಮಕ್ಕೆ ಸೀಮಿತವಾದ ಪಕ್ಷವಲ್ಲ. ಸದ್ಯ ರಾಜ್ಯದಲ್ಲಿ ಕೋವಿಡ್-19ನ ಮೂರನೇ ಅಲೆಯ ಆತಂಕ ಎದುರಾಗಿದೆ. ವೈರಸ್‌ನ ಎರಡು ಅಲೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ವೈರಸ್ ನಿಯಂತ್ರಣದ ನಿಟ್ಟಿನಲ್ಲಿ ಸದ್ಯ ವಿಶೇಷ ಅಧಿವೇಶನ ಕರೆದರೂ ತಪ್ಪಿಲ್ಲ. ಆದರೆ ಬಿಜೆಪಿಗೆ ಪಂಚೇಂದ್ರೀಯಗಳೇ ಇಲ್ಲ. ವಿರೋಧ ಪಕ್ಷದವರು ಏನು ಹೇಳಿದರೂ ಕೇಳಿಸಲ್ಲ, ಕಾಣಿಸಲ್ಲ ಎಂದು ಹರಿಹಾಯ್ದರು.
ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಶತಸಿದ್ಧ: ಎಸ್.ಆರ್.ಪಾಟೀಲ
Advertisement