ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಡ್ಯಾನ್ಸ್ ಮಾಡುತ್ತಿದ್ದ ಮಹಿಳೆಯರ ಮೇಲೆ ಹಣ ತೂರಿದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮೆರವಣಿಗೆಯ ಮಜಲಿನಲ್ಲಿ ಕುಣಿಯುತ್ತಿದ್ದ ಮಹಿಳೆಯರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಣ ತೂರಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದ್ದು, ವಿವಾದಕ್ಕೆ ಕಾರಣವಾಗಿದೆ.
ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಬುಧವಾರ(ಡಿ.15)ದಂದು ನಗರಸಭೆ ವಾರ್ಡ್ ನಂ.31ರ ಕಾಂಗ್ರೆಸ್ ಅಭ್ಯರ್ಥಿ ಗೀತಾಬಾಯಿ ಹಬೀಬ ಹಾಗೂ ವಾರ್ಡ್ ನಂ.32ರ ಕಾಂಗ್ರೆಸ್ ಅಭ್ಯರ್ಥಿ ಸುಮನ್ ಗಣಪತಿ ಜಿತೂರಿ ಅವರ ಮೆರವಣಿಗೆಯಲ್ಲಿ ಇಬ್ಬರು ಮಹಿಳೆಯರು ಭಾಗವಹಿಸಿ ಕುಣಿಯುತ್ತಿದ್ದರು. ಈ ವೇಳೆ ಕೆಲವರು ಕುಣಿಯುತ್ತಿದ್ದ ಮಹಿಳೆಯರ ಮೇಲೆ ಹಣ ತೂರಿದ್ದು, ಕಾರ್ಯಕರ್ತರ ಈ ನಡುವಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ನೃತ್ಯ ಮಾಡುತ್ತಿದ್ದ ಮಹಿಳೆಯರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಣ ತೂರಿದ್ದಕ್ಕಾಗಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೇ, ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಯಾವ ಸಂದೇಶ ಸಾರಲು ಹೊರಟಿದೆ ಎಂದು ಅವಳಿ ನಗರದ ಜನರು ಪ್ರಶ್ನಿಸುತ್ತಿದ್ದಾರೆ. ಚುನಾವಣಾ ಆಯೋಗ ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುವುದು ಎಂಬುದು ಕಾದುನೋಡಬೇಕಿದೆ.
ಹಣ ತೂರಿದವರು ಕಾಂಗ್ರೆಸ್ ಕಾರ್ಯಕರ್ತರಲ್ಲ
31 ಹಾಗೂ 32 ನೇ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸುವ ವೇಳೆ ಮಹಿಳೆಯರ ಮೇಲೆ ಹಣ ತೂರಿದವರು ಕಾಂಗ್ರೆಸ್ ಕಾರ್ಯಕರ್ತರಲ್ಲ, ಹಣ ಹಂಚುವ ವಿಡಿಯೋದಲ್ಲಿ ಇರುವ ಜಾವೇದ್ ಮಾನ್ವಿ ಅವರು, ಬಿಜೆಪಿಯ ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರ ಸಹೋದರರಾಗಿದ್ದು, ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಪಕ್ಷದ ಹೆಸರು ಹಾಳು ಮಾಡಲು ಮಾಡಿರುವ ಷಡ್ಯಂತ್ರ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಎಂ ಎನ್ ಶಾಲಗಾರ ಆರೋಪಿಸಿದ್ದಾರೆ.