ವಿಜಯಸಾಕ್ಷಿ ಸುದ್ದಿ ಬೆಂಗಳೂರು
ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ವಿಷಯಗಳು ಸ್ಫೋಟಗಳೊಳ್ಳುತ್ತಿವೆ. ಚುನಾವಣೆ ಗೆಲ್ಲುವ ಮೊದಲೇ ಕೈ ಪಾಳಯದಲ್ಲಿ ಮುಂದಿನ ಸಿಎಂ ಯಾರು ಎಂಬ ಕಾದಾಟ ಶುರುವಾಗಿದೆ.
ಬಿಜೆಪಿ ಪಾಳಯದಲ್ಲಿ ನಾಯಕತ್ವದ ಫೈಟ್ ಶುರುವಾದ ಬೆನ್ನಲ್ಲಿಯೇ ಕಾಂಗ್ರೆಸ್ ನಲ್ಲಿ ಕೂಡ ಶುರುವಾಗಿದೆ. ಕಾಂಗ್ರೆಸ್ ನಲ್ಲಿಯೂ ಚುನಾವಣೆಗೂ ಮುನ್ನ ಸಿಎಂ ಅಭ್ಯರ್ಥಿ ಯಾರ ಪ್ರಶ್ನೆ ಮೂಡಿದೆ.
ಬಿಜೆಪಿಯಲ್ಲಿ ಇದೇ ರೀತಿ ಫೈಟ್ ಶುರುವಾಗಿತ್ತು. ಆದರೆ, ಹೈಕಮಾಂಡ್ ಮಧ್ಯ ಪ್ರವೇಶಿಸಿ ತಣ್ಣಗೆ ಮಾಡಿದೆ. ಇದರ ಮಧ್ಯೆ ಕಾಂಗ್ರೆಸ್ ನಲ್ಲಿ ಕೂಡ ನಾಯಕತ್ವದ ಗುದ್ದಾಟ ನಡೆದಿದೆ. ಹೈಕಮಾಂಡ್ ಎಂಟ್ರಿ ಬಳಿಕವೂ ತಣ್ಣಗಾಗಬೇಕಿದ್ದ ಬಣ ಬಡಿದಾಟ ಮತ್ತಷ್ಟು ಜೋರಾಗಿದೆ. ಸಿದ್ದರಾಮಯ್ಯ ಬಣದ ಶಾಸಕರು ಸಿದ್ದು ಸಿಎಂ ಜಪವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಸಿದ್ದರಾಮಯ್ಯ ಪರ ದಿನಕ್ಕೊಬ್ಬರು ಸದ್ದು ಮಾಡುತ್ತಿದ್ದಾರೆ. ಶಾಸಕ ಜಮೀರ್, ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದರು. ಇಂದು ಹರಿಹರ ಶಾಸಕ ರಾಮಪ್ಪ ಮತ್ತು ಅಖಂಡ ಶ್ರೀನಿವಾಸಮೂರ್ತಿ ಸಿದ್ದರಾಮಯ್ಯನವರೇ ಸಿಎಂ ಆಗಬೇಕು ಎಂದು ಹೇಳಿದ್ದಾರೆ. ಅದರಲ್ಲಿಯೂ ಹರಿಹರ ಶಾಸಕ ರಾಮಪ್ಪ ಮಾತನಾಡಿ, ಡಿಕೆಶಿಗೆ ಇನ್ನೂ ವಯಸ್ಸಿದೆ, ಮುಂದೆ ಸಿಎಂ ಆಗೋ ಅವಕಾಶ ಇದೆ. 2023ಕ್ಕೆ ಸಿದ್ದರಾಮಯ್ಯನೇ ಸಿಎಂ ಆಗ್ಬೇಕು ಎಂದಿದ್ದಾರೆ.
ಇತ್ತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೇಸರ ಹೊರಹಾಕಿದ್ದಾರೆ. ಸಿಎಂ ಆಗಲು ನನಗೇನು ಅರ್ಜೆಂಟ್ ಇಲ್ಲ. ಇದನ್ನು ನಾಯಕರು ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಸಂಸದ ಡಿಕೆ ಸುರೇಶ್ ಅಂತೂ ಈಗ ಮಾತಾಡ್ತಿರೋರೆಲ್ಲಾ ಅಧಿಕಾರಕ್ಕಾಗಿ ಪಕ್ಷಕ್ಕೆ ಬಂದವರು ಎಂದು ಸಿದ್ದು ಬಣಕ್ಕೆ ಟಾಂಗ್ ಕೊಟ್ಟಿದ್ದಾರೆ.