*ಉಪನ್ಯಾಸಕರ ಮೊಬೈಲ್ ನಲ್ಲಿ ಹರಿದಾಡಿದ ಇತಿಹಾಸ ನಕ್ಷೆ*
• ತಪ್ಪು ಗಂಭೀರವೋ? ಸಾಮಾನ್ಯವೋ? ಎಂದ ಡಿಡಿಪಿಯು
ದುರಗಪ್ಪ ಹೊಸಮನಿ
ವಿಜಯಸಾಕ್ಷಿ ವಿಶೇಷ, ಗದಗ:
ಕೊರೊನಾ ಮಹಾಮಾರಿಯಿಂದಾಗಿ ಎರಡು ವರ್ಷಗಳಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಿದ್ದು, ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯಲ್ಲಿ ಕುಂಠಿತಗೊಂಡಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಬಹುದೊಡ್ಡ ಹೊಡೆತ ಕೊಟ್ಟಿದೆ.
ಮತ್ತೊಂದೆಡೆ, ಡೆಲ್ಟಾ ಹಾಗೂ ಒಮಿಕ್ರಾನ್ ಭೀತಿ ಕಾಡುತ್ತಿರುವುದರಿಂದ ಸದ್ಯ ನಡೆಯುತ್ತಿರುವ ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷೆಗಳೇ ವಾರ್ಷಿಕ ಪರೀಕ್ಷೆಯಾಗುವ ಸಾಧ್ಯತೆಗಳು ಇವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮೂಲಗಳೇ ತಿಳಿಸುತ್ತಿವೆ. ಆದರೆ, ಗದಗ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ರಾಜ್ಯಾದ್ಯಂತ ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷೆಗಳನ್ನು ನಡೆಸುತ್ತಿದೆ. ಕನ್ನಡ, ಇತಿಹಾಸ, ಅರ್ಥಶಾಸ್ತ್ರ, ಕೆಮಿಸ್ಟ್ರಿ ಪರೀಕ್ಷೆಗಳು ಪೂರ್ಣಗೊಂಡಿದ್ದು, ಇನ್ನೂ ಕೆಲವು ವಿಷಯಗಳ ಪರೀಕ್ಷೆಗಳು ನಡೆಯಬೇಕಿದೆ. ಆದರೆ, ಪದವಿ ಪೂರ್ವ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಶಿಸ್ತುಬದ್ಧ ಪರೀಕ್ಷೆಗಳನ್ನು ನಡೆಸದೆ ಕಾಟಾಚಾರಕ್ಕೆ ಎಂಬಂತೆ ಪ್ರಶ್ನೆ ಪತ್ರಿಕೆಗಳನ್ನು ತೆಗೆದು ಪಿಯುಸಿ ಮಧ್ಯಂತರ ಪರೀಕ್ಷೆ ನಡೆಸುತ್ತಿರುವುದು ವಿಪರ್ಯಾಸ.
ಡಿ.9ರಿಂದ ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷೆಗಳು ನಡೆಯುತ್ತಿದ್ದು, ಡಿ.23ರಂದು ಕೊನೆಗೊಳ್ಳಲಿವೆ. ಗದಗ ಜಿಲ್ಲೆಯಲ್ಲಿ ಒಟ್ಟು 9,957 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಡಿ.10ರಂದು ನಡೆದ ಪ್ರಥಮ ವಿಷಯ ಕನ್ನಡ ಭಾಷಾ ಪತ್ರಿಕೆಯ 100 ಅಂಕಗಳ ಪ್ರಶ್ನೆ ಪತ್ರಿಕೆಯಲ್ಲಿ ರೋಮನ್ ಸಂಖ್ಯೆ ಮೂರನೇ ಪ್ರಶ್ನೆಯ ಯಾವುದಾದರೂ ಒಂದಕ್ಕೆ ಸಂದರ್ಭ ಸೂಚಿಸಿ ಸ್ವಾರಸ್ಯ ಬರೆಯರಿ ಎಂಬ ಮೂರು ಅಂಕದ `ಆ’ ವಿಭಾಗದ ಎರಡು ಪ್ರಶ್ನೆಗಳು ಪ್ರಶ್ನೆ ಪತ್ರಿಕೆಯಿಂದ ನಾಪತ್ತೆಯಾಗಿದ್ದವು. ಇದು ಶಿಕ್ಷಕರನ್ನೊಳಗೊಂಡಂತೆ ಪರೀಕ್ಷಾರ್ಥಿಗಳನ್ನು ಗೊಂದಲಕ್ಕೀಡು ಮಾಡಿತ್ತು.
ಡಿ.11ರಂದು ನಡೆದ ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆಯ ಪ್ರಶ್ನೆ ಸಂಖ್ಯೆ 30 ನಾಪತ್ತೆಯಾಗಿತ್ತು. ವಿದ್ಯಾರ್ಥಿಗಳು ಪ್ರಶ್ನೆಗಳಿಗಾಗಿ ದುರ್ಬಿನ್ ಹಾಕಿಕೊಂಡು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ರೋಮನ್ ಸಂಖ್ಯೆ ನಾಲ್ಕನೇ ಪ್ರಶ್ನೆಯ ಇ’ ವಿಭಾಗದ ನಾಲ್ಕು ಅಂಕದ ಪ್ರಶ್ನೆಯಲ್ಲಿ ಯಾವುದಾದರೂ ಒಂದನ್ನು ಕುರಿತು ಪತ್ರ ಬರೆಯಿರಿ ಎಂಬುದರ ಬದಲಿಗೆ '
ಪ್ರಬಂಧ’ ಬರೆಯರಿ ಎಂದು ನಮೂದಾಗಿತ್ತು. ಇದರಿಂದ ವಿದ್ಯಾರ್ಥಿಗಳು ತಬ್ಬಿಬ್ಬುಗೊಂಡಿದ್ದರು. ಬಳಿಕ ಸ್ವತಃ ಶಿಕ್ಷಕರೇ ಪ್ರಶ್ನೆ ಪತ್ರಿಕೆಯಲ್ಲಿ ಪ್ರಬಂಧ’ ಇದ್ದಲ್ಲಿ
ಪತ್ರ’ ಎಂದು ಬರೆದು ಸುಸ್ತಾದ ಪ್ರಸಂಗವೂ ನಡೆಯಿತು.
ವಾಟ್ಸ್ಆ್ಯಪ್‌ನಲ್ಲಿ ಹರಿದಾಡಿದ ಇತಿಹಾಸದ ನಕ್ಷೆ!:
ಯಾವುದೇ ಶೈಕ್ಷಣಿಕ, ಸ್ಪರ್ಧಾತ್ಮಕ ಪರೀಕ್ಷೆಗಳಾಗಲಿ ಪರೀಕ್ಷಾ ಕೊಠಡಿಗಳಲ್ಲಿ ಮೊಬೈಲ್ ನಿಷಿದ್ಧ. ಕೊಠಡಿ ಮೇಲ್ವಿಚಾರಕರು ಸಹಿತ ಮೊಬೈಲ್ ತರುವಂತಿಲ್ಲ. ಆದರೆ, ದುರ್ದೈವದ ಸಂಗತಿ ಎಂದರೆ ಡಿ.9 ಗುರುವಾರ ನಡೆದ ಇತಿಹಾಸ ವಿಷಯದ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ನಕ್ಷೆಯೇ ಇರಲಿಲ್ಲ. ಪರೀಕ್ಷಾ ಸಮಯದಲ್ಲಿ ಪ್ರಶ್ನೆ ಪತ್ರಿಕೆ ಗಮನಿಸಿದ ಬಳಿಕ ಎಚ್ಚೆತ್ತುಕೊಂಡ ಡಿಡಿಪಿಯು ಎಚ್.ಎಸ್. ರಾಜೂರು ಅವರು ಪಿಯು ಬೋರ್ಡ್ ಕಚೇರಿಗೆ ಕರೆ ಮಾಡಿ ನಕ್ಷೆಯನ್ನು ವಾಟ್ಸ್ಆ್ಯಪ್‌ಗೆ ಹಾಕಿಸಿಕೊಂಡು, ಜಿಲ್ಲೆಯ ಎಲ್ಲ ಕಾಲೇಜುಗಳ ಕೆಲವು ಉಪನ್ಯಾಸಕರಿಗೆ ಕಳುಹಿಸಿದ್ದಾರೆ. ಪರೀಕ್ಷೆ ನಡೆದ ಕೆಲಹೊತ್ತಿನ ಬಳಿಕ ಮ್ಯಾಪ್ ಝರಾಕ್ಸ್ ಮಾಡಿಸಿ ಪ್ರತಿಯೊಂದು ವಿದ್ಯಾರ್ಥಿಗಳಿಗೂ ಹಂಚಿದ್ದಾರೆ. ಈ ಮೂಲಕ ಪರೀಕ್ಷಾ ಪಾವಿತ್ರ್ಯಕ್ಕೆ ಸ್ವತಃ ಅಧಿಕಾರಿಗಳೇ ಧಕ್ಕೆಯನ್ನುಂಟು ಮಾಡಿರುವುದು ಶೋಚನೀಯ.
ಕಾಗುಣಿತವೇ ತಪ್ಪು!:
ಡಿ.10ರಂದು ಜರುಗಿದ ಕನ್ನಡ ಪ್ರಶ್ನೆಪತ್ರಿಕೆಯ ಕೆಲವು ಕಡೆಗಳಲ್ಲಿ ಕಾಗುಣಿತಗಳು ತಪ್ಪಾಗಿ ಮುದ್ರಿತವಾಗಿದ್ದವು. ಇದರಿಂದ ವಿದ್ಯಾರ್ಥಿಗಳು ಪ್ರಶ್ನೆ ಅರ್ಥೈಸಿಕೊಳ್ಳಲು ಹೆಣಗಾಡಬೇಕಾಯಿತು. ಪ್ರ.12ರಲ್ಲಿ ಷಡ್ರಸಾನ್ನವನಿಕ್ಕಿ’ ಎಂಬುವ ಬದಲು
ಷಡ್ರಾಸನ್ನವನಿಕ್ಕಿ’ ಎಂದಾಗಿತ್ತು. ಪ್ರ.20ರಲ್ಲಿ ನಿರೂಪಕರು’ ಎಂಬಲ್ಲಿ
ನಿರೂಒಕರು’ ಎಂದಾಗಿತ್ತು. ಅದರಂತೆ, ರೋಮನ್ ಸಂಖ್ಯೆ ನಾಲ್ಕರ ಆ’ ವಿಭಾಗದಲ್ಲಿ
ಪ್ರಬಂಧವನ್ನು’ ಎಂಬಲ್ಲಿ `ಪ್ರಬಂಧಗಳನ್ನು’ ಎಂದು ನಮೂದಾಗಿತ್ತು.
ಡಿಡಿಪಿಯು ಬಾಲಿಶ ಹೇಳಿಕೆ
ದ್ವಿತೀಯ ಪಿಯುಸಿ ಕನ್ನಡ ವಿಷಯದ ಪ್ರಶ್ನೆಪತ್ರಿಕೆಯಲ್ಲಿ ಮೂರು ಅಂಕಗಳ ಎರಡು ಪ್ರಶ್ನೆಗಳು ಮೈನಸ್ ಆಗಿ ಕೇವಲ 97 ಅಂಕಗಳ ಪ್ರಶ್ನೆ ಪತ್ರಿಕೆ ಮಾತ್ರವೇ ಇತ್ತು. ಗ್ರೇಸ್‌ಮಾರ್ಕ್ಸ್ ಕೊಡುವಂತೆ ಪಿಯು ಬೋರ್ಡ್ ನಿರ್ದೇಶಕರಿಗೆ ಮನವಿ ಮಾಡಿಕೊಳ್ಳಲಾಗುವುದು. ಅವರು ಏನು ಹೇಳುತ್ತಾರೋ ನೋಡೋಣ.
ಮಧ್ಯಂತರ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವ ವೇಳೆ ವಿದ್ಯಾರ್ಥಿಗಳಿಗೆ ಎರಡು ಗ್ರೇಸ್‌ಮಾರ್ಕ್ಸ್ ಕೊಡೋಣ ಅಂತ ಹೇಳಿದ್ದು, ಎಲ್ಲರೂ ಅಷ್ಟಕ್ಕೆ ಸುಮ್ಮನಾಗಿದ್ದಾರೆ. ಪ್ರಶ್ನೆ ಪತ್ರಿಕೆಯಲ್ಲಿ ಆಗಿರುವ ತಪ್ಪು ಗಂಭೀರವೋ ಸಾಮಾನ್ಯವೋ ಎಂಬುದನ್ನು ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳಲಾಗುವುದು. ಕನ್ನಡ ವಿಷಯದ ಪರೀಕ್ಷೆ ಡಿ.10ರಂದು ಮುಗಿದಿದೆ. ಮೌಲ್ಯಮಾಪನಕ್ಕೆ ಇನ್ನೂ 15 ದಿನ ಸಮಯವಿದೆ. ಒಂದು ವೇಳೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದರೆ ಗ್ರೆಸ್‌ಮಾರ್ಕ್ಸ್ ಕೊಡುವುದು, ಇಲ್ಲದಿದ್ದರೆ ಇಲ್ಲ ಎಂದು ಡಿಡಿಪಿಯು ಎಚ್.ಎಸ್.ರಾಜೂರು ಬಾಲಿಶವಾಗಿ ಪ್ರತಿಕ್ರಿಯಿಸಿದರು.
ನನಗೆ ಈ ಕುರಿತು ಯಾವುದೇ ಮಾಹಿತಿ ಬಂದಿಲ್ಲ. ನಾನು ಮಾಹಿತಿ ತರಿಸಿಕೊಂಡು ಮಾತನಾಡುತ್ತೇನೆ. ವಿದ್ಯಾರ್ಥಿಗಳಿಗೆ ಗ್ರೇಸ್‌ಮಾರ್ಕ್ಸ್ ಕೊಡುವ ಬಗ್ಗೆ ಪರೀಕ್ಷಾಂಗದ ನಿರ್ದೇಶಕರ ಜೊತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ಸ್ನೇಹಲತಾ, ನಿರ್ದೇಶಕರು. ಪಿಯು ಬೋರ್ಡ್, ಬೆಂಗಳೂರು
ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಎರಡು ಪ್ರಶ್ನೆಗಳು ಮೈನಸ್ ಆಗಿರುವುದು ಪಿಯು ಬೋರ್ಡ್ನಿಂದಲ್ಲ, ನಮ್ಮಿಂದ ತಪ್ಪಾಗಿದೆ. ಪಿಯು ಬೋರ್ಡ್ನವರು ಉತ್ತರ ಪತ್ರಿಕೆಯಲ್ಲಿ ಮ್ಯಾಪ್ ಇಡಬೇಕಿತ್ತು. ಆದರೆ, ಅವರು ಇಟ್ಟಿರಲಿಲ್ಲ. ಪಿಯು ಬೋರ್ಡ್ನವರು ಡಿಟಿಪಿ ಮಾಡಿ ಕಳುಹಿಸಿದ್ದು ಸರಿಯಾಗಿಯೇ ಇತ್ತಾದರೂ, ಮುದ್ರಣ ಮಾಡುವಾಗ ಪ್ರಶ್ನೆಗಳು ತಪ್ಪಿ ಹೋಗಿದೆ. ಇನ್ನು ಪ್ರಶ್ನೆಪತ್ರಿಕೆಯಲ್ಲಿ ಒಮ್ಮೊಮ್ಮೆ ಕಾಗುಣಿತ ತಪ್ಪಾಗಿರುತ್ತವೆ.
ಎಚ. ಎಸ್ . ರಾಜೂರು, ಗದಗ ಡಿಡಿಪಿಯು (ಪ್ರಭಾರ)
ಪ್ರಶ್ನೆಪತ್ರಿಕೆಗಳು ಮುದ್ರಣಗೊಳ್ಳುವುದಕ್ಕಿಂತ ಮುನ್ನ ಪ್ರೂಫ್ ರೀಡ್ ಮಾಡುವುದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಆದ್ಯ ಕರ್ತವ್ಯ. ಆದರೆ, ಅವರು ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಇಂತಹ ಅವಘಡ ಸಂಭವಿಸಿದಾಗ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯ ಒದಗಿಸಿ ಕೊಡಬೇಕು.
ಹೆಸರು ಹೇಳಲಿಚ್ಚಿಸದ ಉಪನ್ಯಾಸಕರು