ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕ್ಷಯ ರೋಗದ ಬಗ್ಗೆ ಯಾರೂ ಭಯ ಪಡುವ ಅಗತ್ಯವಿಲ್ಲ. ಸೂಕ್ತ ಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆದರೆ ಕ್ಷಯರೋಗ ಕಾಡುವುದಿಲ್ಲ. ಆದರೆ ಎಲ್ಲರಿಗೂ ತಮ್ಮ ಆರೋಗ್ಯ ಕಾಳಜಿ ಮುಖ್ಯ ಎಂದು ಗಂಗಾವತಿ ಉಪವಿಭಾಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ ಕರೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕ್ಷಯರೋಗ ನಿರ್ಮೂಲನಾ ಘಟಕ ಕೊಪ್ಪಳ. ಉಪ ವಿಭಾಗ ಆಸ್ಪತ್ರೆ, ತಾಲೂಕ ಆರೋಗ್ಯಾಧಿಕಾರಿಗಳ ಕಚೇರಿ ಗಂಗಾವತಿ, ಕರ್ನಾಟಕ ಆರೋಗ್ಯ ಸಂವರ್ಧನ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಕ್ಷಯ ರೋಗಿಗಳ ಮನೋಚೈತನ್ಯ ಹಾಗೂ ಪೌಷ್ಟಿಕ ಆಹಾರ ವಿತರಣಾ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕ್ಷಯ ರೋಗಿಗಳಿಗೆ ಆತ್ಮಸ್ಥೈರ್ಯ ಹಾಗೂ ಆರೋಗ್ಯದ ಕಳಕಳಿ ನೀಡುವ ಮಹದುದ್ದೇಶದಿಂದ ಉಪವಿಭಾಗ ಆಸ್ಪತ್ರೆಯ ಮಾನಸಿಕ ತಜ್ಞರಾದ ಡಾ.ವಾದಿರಾಜ ಅವರಿಂದ ಶಿಬಿರದಲ್ಲಿ ಪಾಲ್ಗೊಂಡ ಎಲ್ಲ ಕ್ಷಯರೋಗಿಗಳಿಗೆ ಮನೋ ಚೈತನ್ಯ ಹಾಗೂ ಮಾನಸಿಕ ಆರೋಗ್ಯದ ಕೌಶಲ್ಯಗಳ ಬಗ್ಗೆ ಮಾಹಿತಿ ನೀಡುತ್ತಾರೆ ಎಂದರು.
ಕ್ಷಯರೋಗಕ್ಕೆ ಯಾರು ಭಯಪಡುವ ಅಗತ್ಯವಿಲ್ಲ ನಿಮ್ಮೆಲ್ಲರಿಗೂ ನಮ್ಮ ಉಪ ವಿಭಾಗ ಆಸ್ಪತ್ರೆಯ ಎಲ್ಲಾ ವಿಭಾಗಗಳು ಸದಾ ತೆರೆದಿರುತ್ತದೆ. ಸರಿಯಾದ ಸಮಯದಲ್ಲಿ ಊಟ ಮತ್ತು ನಿಯಮಿತ ವ್ಯಾಯಾಮ ಮಾತ್ರೆಗಳನ್ನು ತೆಗೆದುಕೊಳ್ಳುವ ಮೂಲಕ ಸರ್ಕಾರಿ ವ್ಯವಸ್ಥೆಯಲ್ಲಿ ತಜ್ಞರಿಂದ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಅವರು ಕೋರಿದರು.
ಕಾರ್ಯಕ್ರಮದ ಕುರಿತು ಕ್ಷಯರೋಗ ಪರಿವೀಕ್ಷಕ ಮಲ್ಲಿಕಾರ್ಜುನ್ ಅವರು ಮಾತನಾಡಿ, ಕ್ಷಯರೋಗವು ಯಾವುದೇ ಪಾಪ ಕರ್ಮಗಳಿಂದ ಬರುವಂಥದ್ದಲ್ಲ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕ್ಷಯ ಇರುವವರು ಕೆಮ್ಮುವಾಗ, ಸೀನುವಾಗ ಅವರ ಬಾಯಿಂದ ಬರುವ ತುಂತುರು ಹನಿಗಳ ಮುಖಾಂತರ ಆರೋಗ್ಯವಂತ ವ್ಯಕ್ತಿಗೆ ಕ್ಷಯ ಹರಡುತ್ತದೆ.
ಚಿಕಿತ್ಸೆ ಕೊಡದಿರುವ ರೋಗಿಯು ಒಂದು ವರ್ಷಕ್ಕೆ 16 ರಿಂದ 18 ಜನರಿಗೆ ಸೋಂಕನ್ನು ಹರಡುತ್ತಾನೆ. ಆದ್ದರಿಂದ ಶಿಬಿರಾರ್ಥಿಗಳು ನಿಮ್ಮ ಮನೆಯ ಸುತ್ತಮುತ್ತಲಿನಲ್ಲಿರುವ ಕ್ಷಯ ಲಕ್ಷಣವಿರುವ ಅವರನ್ನು ಗುರುತಿಸಿ ಪರೀಕ್ಷೆ ಮತ್ತು ಚಿಕಿತ್ಸೆಗೆ ಕಳುಹಿಸಿಕೊಡಿ ಎಂದು ತಿಳಿಸಿದರು.
ನಕಲಿ ವೈದ್ಯರನ್ನು ಸಂಪರ್ಕಿಸದೆ ಸರ್ಕಾರಿ ವ್ಯವಸ್ಥೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದಲ್ಲಿ ನೀಡುವ ಚಿಕಿತ್ಸೆ ಪಡೆದುಕೊಳ್ಳಲು ಅವರು ಮನವಿ ಮಾಡಿದರು.
ಚಿಕಿತ್ಸಾ ಮೇಲ್ವಿಚಾರಕ ನಾಗರಾಜ್ ಮಾತನಾಡಿ, ಕ್ಷಯ ರೋಗದ ಪರೀಕ್ಷೆ ಮತ್ತು ಚಿಕಿತ್ಸೆ ಉಚಿತವಾಗಿ ನೀಡಲಾಗುವುದು. ಜೊತೆಗೆ ಕ್ಷಯ ದೃಢ ಪಟ್ಟವರಿಗೆ ಸರ್ಕಾರದಿಂದ ಪ್ರತಿ ತಿಂಗಳು ಐನೂರು ರೂ.ಗಳ ಸಹಾಯಧನ ನೀಡಲಾಗುವುದು. ಹಾಗೂ ಚಿಕಿತ್ಸೆಯ ಸಮಯದಲ್ಲಿ ಸಹ ವ್ಯಾಧಿ ಸೋಂಕುಗಳ ಪರೀಕ್ಷೆ ಹಾಗೂ ಚಿಕಿತ್ಸೆ ಕೂಡ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮ ಸಂಯೋಜಕಿ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಕುಮಾರಿಕಾ ಸಿಂಬಿ ಮಾತನಾಡಿ, ಪವರ್ ವಿಟಾ ಪ್ರೋಟೀನ್ ಪೌಡರ್ ಹೇಗೆ ಉಪಯೋಗಿಸಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು. ಕಾರ್ಯಕ್ರಮ ಸಂಯೋಜಕ ಹನುಮಂತ ಅವರು ಶಿಬಿರಾರ್ಥಿಗಳಿಗೆ ತೂಕ, ಅವರ ಆಕ್ಸಿಜನ್ ಮಟ್ಟ, ಟೆಂಪರೇಚರ್ ಪರೀಕ್ಷೆ ಮಾಡಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿ ಶಿವಾನಂದ್, ಸಮುವೆಲ್, ಯಮನೂರಪ್ಪ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.