ವಿಜಯಸಾಕ್ಷಿ ಸುದ್ದಿ, ಕಾರವಾರ
ಮಳೆಯಿಂದಾಗಿ ಕರಾವಳಿ ಪ್ರದೇಶ ತತ್ತರಿಸಿ ಹೋಗಿದೆ. ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಚೇತರಿಸಿಕೊಳ್ಳುವ ಮೊದಲೇ ಇಲ್ಲಿಯ ಜನರು ಪ್ರವಾಹಕ್ಕೆ ತುತ್ತಾಗುವ ಭೀತಿಯಲ್ಲಿ ಇದ್ದಾರೆ. ಹೀಗಾಗಿ ಜಿಲ್ಲೆಯ 166 ಗ್ರಾಮಗಳಲ್ಲಿ ಪ್ರವಾಹ ಸಂಭವಿಸಬಹುದು ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಆರ್ಭಟ ಹೆಚ್ಚಾಗಿದ್ದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದ್ದು, 234 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 16,826 ಜನರಿಗೆ ಆಶ್ರಯ ಕಲ್ಪಿಸಬಹುದಾಗಿದೆ.
ಕಾಳಿ, ಶರಾವತಿ ನದಿ ತೀರ ಪ್ರದೇಶದ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ಜನರನ್ನು ತೀರ ಪ್ರದೇಶದಿಂದ ಬೇರೆಡೆ ಸ್ಥಳಾಂತರಿಸಲು ಸಹ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಮಲೆನಾಡು ಭಾಗದಲ್ಲಿ ಸಹ ಅಲ್ಲಲ್ಲಿ ಅಬ್ಬರದ ಮಳೆ ಸುರಿಯುತ್ತಿದೆ. ಹೆಚ್ಚು ಮಳೆ ಸುರಿದಿದ್ದರಿಂದ ಜಿಲ್ಲೆಯ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.