ವಿಜಯಸಾಕ್ಷಿ ಸುದ್ದಿ, ಗದಗ
ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಡ ಕೂಲಿ ಕಾರ್ಮಿಕರನ್ನು ಬೀದಿಗೆ ತಳ್ಳುವ ಹುನ್ನಾರ ನಡೆಸುತ್ತಿದೆ. ಈ ನಿಟ್ಟಿನಲ್ಲಿ ರೈತ, ಕಾರ್ಮಿಕ ವಿರೋಧಿ ಕೃಷಿ ಸಂಬಂಧಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಹಾಗಾಗಿ ಜನಸಾಮಾನ್ಯರಿಗೆ ಮುಂಬರುವ ದಿನಗಳು ಮಾರಕವಾಗಲಿವೆ ಎಂದು ಸಿಐಟಿಯು ಹಾಗೂ ಹಮಾಲಿ ನೌಕರರ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಆತಂಕ ವ್ಯಕ್ತಪಡಿಸಿದರು.
ಗದಗ ನಗರದ ಗಾಂಧಿ ವೃತ್ತಕ್ಕೆ ಶನಿವಾರ ಆಗಮಿಸಿದ ಕರ್ನಾಟಕ ಪ್ರಾಂತ ರೈತ, ಸಂಘ, ಸಿಐಟಿಯು, ಎಐಎಡಬ್ಲ್ಯೂಯು, ಜನವಾದಿ ಮಹಿಳಾ ಸಂಘಟನೆ ಎಸ್‌ಎಫ್‌ಐ, ಡಿವೈಎಫ್‌ಐ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನಡೆಸುತ್ತಿರುವ ರೈತ-ಕಾರ್ಮಿಕರ ವಿರೋಧಿ ಕೃಷಿ ಸಂಬಂಧಿ ಕಾಯ್ದೆಗಳು ಹಾಗೂ ಕಾರ್ಮಿಕ ಸಂಹಿತೆಗಳ ವಿರುದ್ಧದ ಪ್ರಚಾರ ಜಾಥಾ ಸ್ವಾಗತ ಹಾಗೂ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಆಹಾರ ಭದ್ರತೆ, ಉದ್ಯೋಗದ ಉಳುವಿಗಾಗಿ ಹಾಗೂ ಜೀವನಾವಶ್ಯಕ ವಸ್ತುಗಳು, ಪ್ರೆಟ್ರೋಲ್, ಡಿಸೇಲ್, ಅಡುಗೆ ಅನಿಲಗಳ ಬೆಲೆ ದಿನನಿತ್ಯ ಗಗನಕ್ಕೆ ಏರುತ್ತಿವೆ. ಆಳುವ ಸರ್ಕಾರಗಳು ಎಲ್ಲ ಕ್ಷೇತ್ರ ಹಾಗೂ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುತ್ತಿವೆ. ಬಡ, ಕೂಲಿ ಕಾರ್ಮಿಕರು ಹಾಗೂ ಜನ ಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿವೆ ಎಂದು ಮಹೇಶ ಪತ್ತಾರ ಆರೋಪಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಮಹೇಶ ಹಿರೇಮಠ, ಪ್ರಧಾನ ಕಾರ್ಯದರ್ಶಿ ಮಾರುತಿ ಚಿಟಗಿ ಮಾತನಾಡಿ, 2020ರಲ್ಲಿ ಅಂಗೀಕರಿಸಿರುವ ತ್ರಿವಳಿ ಕೃಷಿ ಶಾಸನಗಳು, ಉದ್ಧೇಶಿತ ವಿದ್ಯುತ್ ತಿದ್ದುಪಡಿ ಮಸೂದೆಗಳು ಸೇರಿದಂತೆ 29 ಕಾರ್ಮಿಕ ಕಾನೂನುಗಳು ರದ್ದಾಗಬೇಕು. ಸರ್ಕಾರ ಜಾರಿಗೊಳಿಸಿರುವ ಕಾಯ್ದೆಗಳು ದೇಶದ ಜನತೆಯ ಉದ್ಯೋಗ, ಆಹಾರ ಭದ್ರತೆ ನಾಶಗೊಳಿಸಿ ಹಸಿವು ಮತ್ತು ನಿರುದ್ಯೋಗ ಹೆಚ್ಚಳಗೊಳಿಸುತ್ತಿವೆ ಎಂದು ದೂರಿದರು. ಈ ಸಂದರ್ಭದಲ್ಲಿ ರೋಣ ತಾಲೂಕಿನ ಬೆಳವಣಕಿ ಗ್ರಾಮದ ಕಲಾ ತಂಡದವರು ರೈತ ವಿರೋಧಿ ಕಾನೂನು ಅರಿವು ಹಾಗೂ ಜಾಗೃತಿ ಮೂಡಿಸಿದರು.
ಸಿಐಟಿಯು ರಾಜಾಧ್ಯಕ್ಷೆ ಎಸ್.ವರಲಕ್ಷ್ಮೀ, ಎಂ.ಬಿ. ನಾಡಗೌಡ್ರ, ಸಿಐಟಿಯು ಮುಖಂಡರಾದ ಬಸವರಾಜ ಮಂತೂರ, ಪೀರು ರಾಠೋಡ, ಮಹಾಗುಂಡಪ್ಪ ಅಂಗಡಿ, ರೈತ ಸಂಘದ ಮುಖಂಡರಾದ ಮುತ್ತನಗೌಡ ಚೌಡರೆಡ್ಡಿ, ಮಹಾದೇವಗೌಡ ಪಾಟೀಲ, ಸಂಗಣ್ಣ ದಂಡಿನ ಸೇರಿದಂತೆ ಗ್ರಾಪಂ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಹಮಾಲಿ ಕಾರ್ಮಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಜಾಥಾದಲ್ಲಿ ಪಾಲ್ಗೊಂಡಿದ್ದರು.