ಬರವಣಿಗೆ ಕೌಶಲ್ಯ ಬೆಳೆಸಿಕೊಳ್ಳಿ
ವಿಜಯಸಾಕ್ಷಿ ಸುದ್ದಿ, ಕೊಪ್ಪಳ;
ಪತ್ರಿಕೋದ್ಯಮ ನಿಂತ ನೀರಲ್ಲ. ಹೊಸ ಸಾಧ್ಯತೆಗಳತ್ತ ಮುಖ ಮಾಡಿರುವ ಕ್ಷೇತ್ರ. ಡಿಜಿಟಲ್ ಮೀಡಿಯಾ ಮೂಲಕ ಆರ್ಥಿಕ ಸದೃಢತೆಗೆ ಒಡ್ಡಿಕೊಂಡಿರುವ ಪತ್ರಿಕಾರಂಗದಲ್ಲಿ ಈಗ ಬರವಣಿಗೆಗೆ, ಬೆಳವಣಿಗೆಗೆ ವಿಫುಲ ಅವಕಾಶಗಳಿವೆ ಎಂದು ಹಿರಿಯ ಪತ್ರಕರ್ತ ಸಿದ್ಧನಗೌಡ ಪಾಟೀಲ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಪತ್ರಿಕೋದ್ಯಮ ವಿಭಾಗ ಹಾಗೂ ಐಕ್ಯುಎಸಿ ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ನೂತನವಾಗಿ ಹೊರತರುತ್ತಿರುವ ಮಾಸಪತ್ರಿಕೆ ‘ಕಾಲೇಜು ರಂಗ ಎಂಬ ಟೈಟಲ್ ಅನಾವರಣಗೊಳಿಸಿ ಅವರು ಮಾತನಾಡಿದರು.
‘ಕಾಲೇಜಿನಲ್ಲಿ ಸಾಮಾನ್ಯವಾಗಿ ಕಲಿಕೆ ಇರುತ್ತದೆ. ಇಂಥ ಚಟುವಟಿಕೆಗಳಿಂದ ಪ್ರಯೋಗಶೀಲತೆ, ಕ್ರಿಯಾಶೀಲತೆ ಹೆಚ್ಚಾಗುತ್ತದೆ. ಕಾಲೇಜು ರಂಗ ವಿದ್ಯಾರ್ಥಿಗಳ ಪ್ರತಿಭೆಗೆ ದೊಡ್ಡ ವೇದಿಕೆಯಾಗಿದ್ದು ಪ್ರಯೋಜನ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ತಿಮ್ಮಾರೆಡ್ಡಿ ಮಾತನಾಡಿ, ‘ಶಂಕರನಾಗ್ ಆರಂಭಿಸಿದ ರಂಗಶಂಕರದಿಂದ ಅನೇಕರು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ನಮ್ಮ ಕಾಲೇಜಿನ ಈ ಕಾಲೇಜು ರಂಗ ಪತ್ರಿಕೆಯಿಂದ ವಿದ್ಯಾರ್ಥಿಗಳು ಪತ್ರಿಕಾಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಆಶಿಸಿದರು.
ಐಕ್ಯುಎಸಿ ಘಟಕದ ಸಂಯೋಜಕ ಡಾ.ಪ್ರಭುರಾಜ್ ನಾಯಕ್ ಮಾತನಾಡಿ, ‘ಸಮಾಜದಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಅಗಾಧ ಶಕ್ತಿ ಇದೆ. ಲೇಖನಿ ಜೊತೆಗಿದ್ದರೆ ಪತ್ರಕರ್ತನಿಗೆ ಅದು ದೊಡ್ಡ ಬಲ ಇದ್ದಂತೆ. ಕಾಲೇಜು ರಂಗ ನಿರಂತರತೆ ಕಾಪಾಡಿಕೊಳ್ಳಲಿ, ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಲಿ ಎಂದು ಹಾರೈಸಿದರು.
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ವಿಜಯಕುಮಾರ್ ಕುಲಕರ್ಣಿ ಮಾತನಾಡಿ, ‘ಪತ್ರಿಕಾ ಕ್ಷೇತ್ರ ಸಂವಿಧಾನದ ನಾಲ್ಕನೇ ಅಂಗ. ಮೂರು ಅಂಗಗಳು ವೈಫಲ್ಯವಾದಾಗ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವುದೇ ಪತ್ರಿಕಾ ರಂಗ. ಪ್ರಾಯೋಗಿಕವಾಗಿಯೂ ವಿದ್ಯಾರ್ಥಿಗಳು ಈ ಹಂತದಿಂದಲೇ ನೈಪುಣ್ಯತೆ ಗಳಿಸಲಿ ಎನ್ನುವ ಕಾರಣಕ್ಕಾಗಿ ಕಾಲೇಜು ರಂಗ ಆರಂಭಿಸಲಾಗುತ್ತಿದ್ದು, ಕಾಲೇಜಿನ ಎಲ್ಲ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಸಹಕಾರ ಇರಲಿ ಎಂದು ಕೋರಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಮಾರುತೇಶ್ ಬಿ. ಮಾತನಾಡಿ, ‘ಪತ್ರಿಕೋದ್ಯಮ ವಿಭಾಗಕ್ಕೆ ಕ್ರಿಯಾಶೀಲ ಉಪನ್ಯಾಸಕರಿದ್ದು ಪಾಠದ ಜೊತೆಗೆ ಪ್ರಾಯೋಗಿಕತೆಗೂ ಒತ್ತು ನೀಡಿರುವುದು ಸಂತಸದ ಸಂಗತಿ. ಬರುವ ದಿನಗಳಲ್ಲಿ ಕಾಲೇಜಿನಲ್ಲಿ ಪತ್ರಿಕೋದ್ಯಮ ರೆಗ್ಯೂಲರ್ ಕೋರ್ಸ್ ಆರಂಭಿಸಲಾಗುವುದು ಎಂದು ತಿಳಿಸಿದರು.
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಬಸವರಾಜ ಕರುಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಧುರಾ ಮತ್ತು ಸ್ವಾತಿ ಪ್ರಾರ್ಥಿಸಿದರು. ನಿಂಗಮ್ಮ ನಿರೂಪಿಸಿದರು. ರಮೇಶ್ ಸ್ವಾಗತಿಸಿದರು. ರೇಷ್ಮಾ ಅತಿಥಿ ಪರಿಚಯ ಮಾಡಿಕೊಟ್ಟರು. ಭೀಮೇಶ್ ವಂದಿಸಿದರು.