ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ರಾತ್ರೋ ರಾತ್ರಿ ದುಷ್ಕರ್ಮಿಗಳು ಹಚ್ಚಿದ ಬೆಂಕಿಗೆ ಶೇಂಗಾ ಬಣವೆಯೊಂದು ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಹರದಗಟ್ಟಿ ಗ್ರಾಮದಲ್ಲಿ ನಡೆದಿದೆ.
ಶೇಂಗಾ ಬಣವೆ ಸುಟ್ಟಿದ್ದನ್ನು ಕಂಡ ರೈತನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ರೈತ ನಿಂಗಪ್ಪ ಮಾಗಡಿ ಎಂಬುವವರಿಗೆ ಸೇರಿದ ಸುಮಾರು 15 ಟ್ಯಾಕ್ಟರ್ ಶೇಂಗಾ ಬಣವೆ ಬೆಂಕಿಗೆ ಆಹುತಿಯಾಗಿದೆ.
ಸಾಲ ಸೂಲ ಮಾಡಿ ಕಷ್ಟಪಟ್ಟು 15 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಎರಡು ಲಕ್ಷ ರೂ.ಗೂ ಅಧಿಕ ಮೌಲ್ಯದ ಶೇಂಗಾ ಸಂಗ್ರಹಿಸಿಟ್ಟಿದ್ದ ಶೇಗಾ ಬೆಳೆ ಸುಟ್ಟು ಕರಕಲಾಗಿದೆ.
ಇದರಿಂದ ಕಂಗಾಲಾಗಿರುವ ರೈತ ಕುಟುಂಬ ವರ್ಷ ಪೂರ್ತಿ ದನಕರುಗಳಿಗೆ ಹೊಟ್ಟು ಮೇವಿಗೆ ಹೇಗೆ ಮಾಡುವುದೆಂಬ ಚಿಂತೆಯಲ್ಲಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸಿದ್ದಾರೆ. ಲಕ್ಷ್ಮೇಶ್ವರ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಯಾರೋ ಕಿಡಿಗೇಡಿಗಳು ಬಣವೆಗೆ ಬೆಂಕಿ ಹಚ್ಚಿದ್ದು, ಅವರು ಯಾರೆಂಬುದನ್ನು ಪತ್ತೆ ಮಾಡಬೇಕು. ರೈತ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು.
ಮುತ್ತುರಾಜ ಗಣೆಪ್ಪನವರ, ಗ್ರಾಮಸ್ಥ