ವಿಜಯಸಾಕ್ಷಿ ಸುದ್ದಿ, ಮೈಸೂರು
ಕಿಡಿಗೇಡಿಗಳ ಅಟ್ಟಹಾಸಕ್ಕೆ ಎರಡು ಚಿರತೆ ಬಲಿಯಾಗಿರುವ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಶುಂಠಿ ಬೆಳೆ ಬೆಳೆದಿರುವ ಜಮೀನಿನಲ್ಲಿ ಎರಡು ಚಿರತೆಗಳ ಶವ ಕಂಡು ಬಂದಿದ್ದರಿಂದಾಗಿ ಈ ವಿಷಯ ಬೆಳಕಿಗೆ ಬಂದಿದೆ. 5 ವರ್ಷದ ಹೆಣ್ಣು ಚಿರತೆ ಮತ್ತು 1 ವರ್ಷದ ಮರಿ ಚಿರತೆ ವಿಷ ತಿಂದು ಸ್ಥಳದಲ್ಲಿಯೇ ಸಾವನ್ನಪ್ಪಿವೆ.
ನಂಜನಗೂಡು ತಾಲೂಕಿನ ಕಡಬೂರು ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದೆ ಎನ್ನಲಾಗಿದೆ. ಕಡಬೂರು ಗ್ರಾಮದ ರಾಮನಾಯಕ ಎಂಬುವರ ಶುಂಠಿ ಬೆಳೆ ಜಮೀನು ಮತ್ತು ಬಾಳೆ ತೋಟದಲ್ಲಿ 2 ಚಿರತೆಗಳ ಶವ ಸಿಕ್ಕಿವೆ.
ಈ ಚಿರತೆಗಳು ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು ವಿಷ ತಿಂದು ಸಾವನ್ನಪ್ಪಿವೆ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ನಂಜನಗೂಡಿನ ಅರಣ್ಯ ಇಲಾಖಾಧಿಕಾರಿ ರಕ್ಷಿತ್ ಮತ್ತು ಜನಾರ್ದನ್ ಸೇರಿದಂತೆ ಇನ್ನಿತರ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳಕ್ಕೆ ಶ್ವಾನ ದಳದ ಸಿಬ್ಬಂದಿ ಆಗಮಿಸಿ ಕಿಡಿಗೇಡಿಗಳ ಹೆಜ್ಜೆ ಗುರುತಿನ ಪರಿಶೀಲನೆ ನಡೆಸಲಾಗುತ್ತಿದೆ. ಕಳೆದ ವರ್ಷಗಳ ಹಿಂದೆ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ 3 ಚಿರತೆಗಳು ಕೂಡ ಸಾವನ್ನಪ್ಪಿದ್ದವು. ಆದರೆ, ಚಿರತೆಗಳು ಸಾವನ್ನಪ್ಪಿ ವರ್ಷ ಕಳೆದರೂ ಸಾವಿಗೆ ಕಾರಣರಾಗಿರುವ ಕಿಡಿಗೇಡಿಗಳ ಬಂಧನಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿಲ್ಲ. ಈಗ ಸದ್ಯ ಮತ್ತೆ ನಂಜನಗೂಡು ತಾಲೂಕಿನ ಕಡೂಬೂರು ಗ್ರಾಮದಲ್ಲಿ 2 ಚಿರತೆಗಳು ವಿಷ ತಿಂದು ಸಾವನ್ನಪ್ಪಿವೆ. ಇನ್ನಾದರೂ ಅರಣ್ಯ ಅಧಿಕಾರಿಗಳು ಇಂತಹ ಕಿಡಿಗೇಡಿಗಳ ಹೆಡೆಮೂರಿ ಕಟ್ಟುವರೇ? ಕಾಯ್ದು ನೋಡಬೇಕಿದೆ.