ವಿಜಯಸಾಕ್ಷಿ ಸುದ್ದಿ, ಗದಗ:
ಗದಗ-ಬೆಟಗೇರಿ ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಗೆಲುವಿಗಾಗಿ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಮತಗಿಟ್ಟಿಸಿಕೊಳ್ಳಲು ವಾಮಮಾರ್ಗದ ಜೊತೆಗೆ ಆಸೆ, ಆಮಿಷಗಳನ್ನೊಡ್ಡುತ್ತಿರುವುದು ದುರಂತ.
ಹೌದು, ಅವಳಿ ನಗರದ 30ನೇ ವಾರ್ಡಿನ ಸಾಮಾನ್ಯ ಮೀಸಲು ಕ್ಷೇತ್ರಕ್ಕೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ರೇಖಾ ಅಮರನಾಥ್ ಬೆಟಗೇರಿ ಅವರು ನಿನ್ನೆ ರಾತ್ರಿ ಮತದಾರರಿಗೆ ಬಿಜೆಪಿಗೆ ಓಟ್ ಹಾಕಲು ಟೋಕನ್ ಹಂಚಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಭಾನುವಾರ ರಾತ್ರಿ ‘ಶ್ರೀಗುರು ಪುಟ್ಟರಾಜ ಕೃಪೆ ಎಂದು ಹೆಸರಿರುವ ವಿಸಿಟಿಂಗ್ ಕಾರ್ಡ್ ಹಂಚಿದ್ದಾರೆ. ವಿಸಿಟಿಂಗ್ ಕಾರ್ಡ್ ಹಿಂದುಗಡೆ ತಮ್ಮ ಸೀರಿಯಲ್ ನಂಬರ್ ಇರುವ ಟೋಕನ್‌ನ್ನು ಮತದಾರರಿಗೆ ಹಂಚಿಕೆ ಮಾಡಿ ಆಮಿಷವೊಡ್ಡಿದ್ದಾರೆ ಎನ್ನಲಾಗುತ್ತಿದೆ.
ಅದರಂತೆ, 25ನೇ ವಾರ್ಡ್ ವ್ಯಾಪ್ತಿಯ ಹಾಳದಿಬ್ಬ ಓಣಿಯ 94ರ ಮತಗಟ್ಟೆಯಲ್ಲಿ ಚುನಾವಣಾ ಸಹಾಯಕರೊಬ್ಬರು ಮತ ಹಾಕಲು ಬಂದ ಮತದಾರರಿಗೆ ಬಿಜೆಪಿಗೆ ಮತ ಹಾಕುವಂತೆ ಹೇಳಿದ್ದು, ಅದೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮಂದಾಲಿ ಅಧಿಕಾರಿಯ ಈ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಬಿಜೆಪಿಗೆ ಮತ ಹಾಕುವಂತೆ ಹೇಳಿದ ಅಧಿಕಾರಿಯನ್ನು ಆ ಮತಗಟ್ಟೆಯಿಂದ ಎತ್ತಂಗಡಿ ಮಾಡಿದ ಪ್ರಸಂಗ ನಡೆದಿದೆ.