ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು
ವ್ಯಾಕ್ಸಿನ್ ಪಡೆದುಕೊಳ್ಳುವುದಕ್ಕಾಗಿ ಜನ ಸಾಕಷ್ಟು ಸಂಖ್ಯೆಯಲ್ಲಿ ಮುಂದಾಗುತ್ತಿದ್ದಾರೆ. ಅಲ್ಲದೇ, ವ್ಯಾಕ್ಸಿನ್ ಗಾಗಿ ಮುಗಿ ಬೀಳುತ್ತಿರುವ ದೃಶ್ಯಗಳು ಕೂಡ ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಕಾಫಿನಾಡಿನಲ್ಲಿ ಮಾತ್ರ ಯಾರದ್ದೋ ಹೆಸರಿನಲ್ಲಿ ಇನ್ನ್ಯಾರೋ ಲಸಿಕೆ ಹಾಕಿಸಿಕೊಳ್ಳುತ್ತಿದ್ದು, ಇದಕ್ಕೆ ಅಧಿಕಾರಿಗಳೇ ಬೆಂಗಾವಲಾಗಿ ನಿಂತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.
ಕೊರೊನಾ ವ್ಯಾಕ್ಸಿನ್ ಹಲವರಿಗೆ ಒಂದು ದಂಧೆಯಂತಾಗಿ ಬಿಟ್ಟಿದೆ. ಹೀಗಾಗಿ ಸರ್ಕಾರ ಹಲವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಪೊಲೀಸರು ಕೂಡ ಅಲರ್ಟ್ ಆಗಿಯೇ ಇದ್ದಾರೆ. ಆದರೂ ಕಳ್ಳರು ಮಾತ್ರ ತಮ್ಮ ದಂಧೆ ಮುಂದುವರೆಸಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಅರಣ್ಯ ಇಲಾಖೆಯಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇವರನ್ನು ಕೊರೊನಾ ವಾರಿಯರ್ ಎಂದು ಘೋಷಿಸಿ ಜೂ. 2ರಂದು ವ್ಯಾಕ್ಸಿನ್ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಅಂದು ಕೆ.ಎನ್.ಸೋಮಶೇಖರ್ ಎಂಬ ವ್ಯಕ್ತಿ ಡಿ ದರ್ಜೆ ನೌಕರ ಎಂದು ಹೇಳಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಆದರೆ, ಆ ವ್ಯಕ್ತಿಗೂ ಹಾಗೂ ಇಲಾಖೆಗೂ ಯಾವುದೇ ಸಂಬಂಧವಿಲ್ಲ.
ಸದ್ಯ ಆತನಿಗೆ ಹಾಗೂ ಇಲಾಖೆಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಮೂಡಿಗೆರೆ ಆರ್.ಎಫ್.ಓ. ಅವರು ಸಿಬ್ಬಂದಿ ಎಂದು ಇಲಾಖೆಯಿಂದ ಅಧಿಕೃತ ಲೆಟರ್ ಕಳಿಸಿರುವುದು ಏಕೆ? ಎಂಬ ಚರ್ಚೆ ಪ್ರಾರಂಭವಾಗಿದೆ. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ವ್ಯಾಕ್ಸಿನ್ ಗಾಗಿ ದಿನಗಟ್ಟಲೇ ಕಾಯುತ್ತೇವೆ. ಅಧಿಕಾರಿಗಳು ತಮಗೆ ಬೇಕಾದವರಿಗೆ, ಮನೆಯವರಿಗೆ ನಕಲಿ ದಾಖಲೆ ಕೊಟ್ಟು ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿದ್ದಾರೆ ಇದು ಎಷ್ಟರ ಮಟ್ಟಿಗೆ ಸರಿ? ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವ್ಯಾಕ್ಸಿನ್ ಪಡೆದ ಸಿಬ್ಬಂದಿಗಳ ಪಟ್ಟಿಯಲ್ಲಿ ಸೋಮಶೇಖರ್ ಹೆಸರಿದೆ. ಸದ್ಯ ತಹಸೀಲ್ದಾರ್ ಕಾರಣ ಕೇಳಿ ಆರ್.ಎಫ್.ಓಗೆ ನೊಟೀಸ್ ನೀಡಿದ್ದಾರೆ. ಆರ್.ಎಫ್.ಓ. ಉತ್ತರಕ್ಕಾಗಿ ಕಾಯುತ್ತಿದ್ದಾರೆ.
ಸೋಮಶೇಖರ್ ಎಂಬುವವರು ಅರಣ್ಯ ಇಲಾಖೆ ಅಧಿಕಾರಿಯ ಪತಿ ಎನ್ನಲಾಗುತ್ತಿದ್ದು, ಅಧಿಕಾರಿಯ ಕುಟುಂಬಸ್ಥರಿಗೆ ವ್ಯಾಕ್ಸಿನ್ ಹಾಕಿಸಲು ಇಲಾಖೆಯ ಸಿಬ್ಬಂದಿಯೇ ಈ ರೀತಿ ಕಳ್ಳ ದಾರಿ ಹಿಡಿದಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ಕುರಿತು ತನಿಖೆಯಾಗಬೇಕು ಎಂದು ಕೂಡ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.