ವಿಜಯಸಾಕ್ಷಿ ಸುದ್ದಿ, ಗದಗ:
ಕುಟುಂಬ ಕಲಹದಿಂದ ಬೇಸತ್ತಿದ್ದ ಮುಖ್ಯ ಪೇದೆಯೋರ್ವ 303 ಬಂದೂಕಿನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ಜರುಗಿದೆ.
ಇಲ್ಲಿನ ಜಿಲ್ಲಾಡಳಿತ ಭವನದ ಖಜಾನೆ ವಿಭಾಗದಲ್ಲಿ ಕರ್ತವ್ಯ ಮಾಡುತ್ತಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್ಸ್‌ಟೇಬಲ್ ಕಿರಣಕುಮಾರ್ ಕೊಪ್ಪದ (45) ಎಂಬಾತನೇ ಕತ್ತಿಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿ.
ಸಂಜೆ ಆರು ಗಂಟೆಯಿಂದ ಒಂಬತ್ತು ಗಂಟೆಯವರೆಗೆ ಡ್ಯೂಟಿಗೆ ಬಂದಿದ್ದ ಕಿರಣಕುಮಾರ್
ಖಜಾನೆಯ ಕಛೇರಿಯ ಎಲ್ಲಾ ಬಾಗಿಲುಗಳನ್ನು ಹಾಕಿಕೊಂಡು, ಕುರ್ಚಿ ಮೇಲೆ ಕುಳಿತು, ಕೈಯಲ್ಲಿದ್ದ 303 ರೈಫಲ್ ನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ರಾತ್ರಿ 9 ಗಂಟೆಗೆ ನೈಟ್ ಡ್ಯೂಟಿ ಮಾಡುವ ಇನ್ನೋರ್ವ ಸಿಬ್ಬಂದಿ ಬಂದು ಬಾಗಿಲು ಬಡಿದರೂ ತೆರೆಯದ ಕಾರಣ ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.
ಸುದ್ದಿ ತಿಳಿದು ಗಾಬರಿಗೊಂಡ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ವಿದ್ಯಾನಂದ ನಾಯಕ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು ಬಾಗಿಲು ಒಡೆದು ನೋಡಿದಾಗ ಕಿರಣಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.
ಕಿರಣಕುಮಾರ್ ಕೈಯಲ್ಲಿದ್ದ ರೈಫಲ್ ನಿಂದ ಕುತ್ತಿಗೆಗೆ ಇಟ್ಟುಕೊಂಡು ಡ್ರ್ಯಾಗರ್ ಕಾಲಿನಿಂದ ಪ್ರೆಸ್ ಮಾಡಿದ್ದಾನೆ. ಆಗ ರೈಫಲ್ ನಿಂದ ಹಾರಿದ ಗುಂಡು, ಕತ್ತನ್ನು ಸೀಳಿಕೊಂಡು ಗೋಡೆಗೆ ಹೋಗಿ ತಾಗಿದೆ. ಇದರಿಂದಾಗಿ ಕಿರಣಕುಮಾರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೌಟುಂಬಿಕ ಕಲಹ ಹಾಗೂ ಜೀವನದಲ್ಲಿ ಜಿಗುಪ್ಸೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಂದೆ ತಿಳಿಸಿದ್ದಾರೆ.
ಸುದ್ದಿ ತಿಳಿದು ಎಸ್ಸಿ ಶಿವಪ್ರಕಾಶ್ ದೇವರಾಜು, ಡಿವೈಎಸ್ಪಿ ಶಿವಾನಂದ ಪಟ್ಟಣಶೆಟ್ಟಿ, ಇನ್ಸ್‌ಪೆಕ್ಟರ್ ಗಳಾದ ಸಾಲಿಮಠ, ರವಿಕುಮಾರ್ ಕಪ್ಪತನವರ್, ಸುಬ್ಬಾಪೂರಮಠ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದ್ದರು. ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.