ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಕಳಪೆ ಕಾಮಗಾರಿ. ಅಧಿಕ ಮಳೆ ಮತ್ತು ರಸ್ತೆಯಲ್ಲಿ ಕೈಗೊಂಡಿರುವ ಪೈಪ್ಲೈನ್ ಕಾಮಗಾರಿ ಕಾರಣದಿಂದಾಗಿ ಮತ್ತು ಟೂಲ್ ಟ್ಯಾಕ್ಸ್ ಉಳಿಸಲು ಭಾರಿ ಗಾತ್ರದ ವಾಹನಗಳು ಸಂಚಾರ ಮಾಡುತ್ತಿರುವ ಕಾರಣದಿಂದ ಗಂಗಾವತಿ-ಹುಲಿಗಿ ರಸ್ತೆಯು ಸಂಪೂರ್ಣ ಹಾಳಾಗಿ ಹೋಗಿದೆ. ತಕ್ಷಣ ಇದನ್ನು ಸರಿಪಡಿಸಿ ಎಂದು ಆಮ್ ಆದ್ಮಿ ಪಕ್ಷದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕ ಅಧ್ಯಕ್ಷರಾದ ಶರಣಪ್ಪ ಸಜ್ಜಿಹೊಲ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುವ ಅವರು ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಹೊಂಡಗಳು ಬಿದ್ದು ಈ ರಸ್ತೆಯಲ್ಲಿ ಜನರು ಜೀವವನ್ನು ಕೈಯಲ್ಲಿಡಿದುಕೊಂಡು ಪ್ರಯಾಣಿಸುತ್ತಿದ್ದಾರೆ. ಮಳೆಯಿಂದಾಗಿ ರಸ್ತೆಯ ಮೇಲೆ ಬಿದ್ದಿರುವ ದೊಡ್ಡ ದೊಡ್ಡ ಗುಂಡಿಗಳಲ್ಲಿ ನೀರು ತುಂಬಿ ಸಂಚರಿಸಲಿಕ್ಕೆ ಅಸಾಧ್ಯವಾದ ಪರಿಸ್ಥಿತಿ ಉಂಟಾಗಿರುತ್ತದೆ.
ಇದೇ ರಸ್ತೆಯಲ್ಲಿ ಪ್ರಸಿದ್ದ ಯಾತ್ರಾ ಸ್ಥಳಗಳಾದ ಅಂದನಾದ್ರಿ ಬೆಟ್ಟ, ಪಂಪಾಸರೋವರ, ಆನೆಗುಂದಿ, ನವ ವೃಂದಾವನ, ೬೪ ಕಂಬಗಳ ಕಲ್ಲಿನ ಮಂಟಪ ಮತ್ತು ದುರ್ಗಾ ದೇವಸ್ಥಾನ, ಪ್ರಸಿದ್ದ ಹುಲಿಗೆಮ್ಮ ದೇವಿ ದೇವಸ್ಥಾನ ಮತ್ತು ಪ್ರವಾಸಿ ತಾಣವಾದ ಸಣಾಪೂರ ಕೆರೆ, ಕಲ್ಲಿನ ಸೇತುವೆ, ರಾಂಪೂರದ ಗುಹಾ ಚಿತ್ರಗಳಿರುವ ತಾಣ, ಮಲ್ಲಾಪೂರ ಮತ್ತು ಬೋರಕಾ ಜಲ ವಿದ್ಯುತ್ ಉತ್ಪಾದನಾ ಕೇಂದ್ರ ಮುಂತಾದ ಸ್ಥಳಗಳಿಗೆ ತಲುಪಲು ಗಂಗಾವತಿ-ಹುಲಿಗಿ ರಸ್ತೆಯನ್ನೆ ಅವಲಂಬಿಸಿದ್ದು, ಒಟ್ಟು ೩೨ ಕಿ.ಮೀ. ಉದ್ದದ ಈ ರಸ್ತೆ ಈಗ ಸಂಪೂರ್ಣ ಹಾಳಾಗಿ ಹೋಗಿದ್ದು, ಇಲ್ಲಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಪ್ರವಾಸಿಗರಿಗೆ ಮತ್ತು ಈ ರಸ್ತೆಯ ಮೂಲಕ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರತಿ ದಿನವೂ ನರಕ ದರ್ಶನವಾಗುತ್ತಿದೆ ಎಂದರು.
ಇನ್ನು ಈ ವರ್ಷ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಮಳೆ ಮತ್ತು ಕಳಪೆ ರಸ್ತೆ ಕಾಮಗಾರಿ ನಿರ್ವಹಿಸಿದ ಕಾರಣದಿಂದ ರಸ್ತೆ ಈಗ ಸಂಪೂರ್ಣ ಹಾಳಾಗಿದ್ದು, ರಸ್ತೆ ಅಪಘಾತಗಳಿಗೆ ಆಹ್ವಾನ ನೀಡುವಂತಾಗಿದೆ. ರಸ್ತೆಯ ತುಂಬಾ ತುಂಬಿರುವ ಗುಂಡಿಗಳಿಂದಾಗಿ ಅಪಘಾತದಂತಹ ಅಹಿತಕರ ಘಟನೆಗಳು ಘಟಿಸುವ ಮೊದಲೇ ಶಾಸಕರಾದ ಪರಣ್ಣ ಮುನವಳ್ಳಿ, ರಾಘವೇಂದ್ರ ಹಿಟ್ನಾಳ ಅವರು ಎಚ್ಚತ್ತುಕೊಂಡು ಕೂಡಲೇ ಈ ರಸ್ತೆಯ ಡಾಂಬರೀಕರಣ ಮಾಡಬೇಕು. ಶಾಸಕರುಗಳು ಒಮ್ಮೆ ಈ ರಸ್ತೆ ಮಾರ್ಗದ ಮೂಲಕ ಸಂಚಾರ ಮಾಡಿ ಪರಿಸ್ಥಿತಿಯನ್ನು ಅವಲೋಕಿಸಬೇಕು ಎಂದು ತಿಳಿಸಿದರು.
ಕೂಡಲೇ ಗಂಗಾವತಿ-ಹುಲಿಗಿ ರಸ್ತೆ ಡಾಂಬಾರಿಕರಣ ಕಾಮಗಾರಿ ಕೈಗೊಳ್ಳಿ; ಶರಣಪ್ಪ ಸಜ್ಜಿಹೊಲ
Advertisement