ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಭಾನುವಾರ ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಅಂಗೀಕಾರ ಸಂದರ್ಭದಲ್ಲಿ ಉಂಟಾದ ಗೊಂದಲ, ಗದ್ದಲದ ಘಟನೆಗೆ ಸಂಬಧಿಸಿದಂತೆ ಎಂಟು ರಾಜ್ಯಸಭಾ ವಿಪಕ್ಷ ಸಂಸದರನ್ನು ಸೋಮವಾರ ಕಲಾಪದಿಂದ ಅಮಾನತು ಮಾಡಲಾಗಿದೆ.
ಸೋಮವಾರ ಈ ವಿಷಯ ಪ್ರಕಟಿಸಿದ ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು, ಈ ಎಂಟು ಸದಸ್ಯರು ತುಂಬ ಅಗೌರವಯುತ ನಡವಳಿಕೆ ತೋರಿಸಿದ್ದಾರೆ. ಪೀಠದಲ್ಲಿದ್ದ ಉಪ ಸಭಾಪತಿಯವರನ್ನು ಅವಮಾನಿಸಿದ್ದಾರೆ, ದಾಂಧಲೆಯ ಸ್ವರೂಪದ ಗದ್ದಲ ಮಾಡುವ ಮೂಲಕ ರಾಜ್ಯಸಭೆಯ ಘನತೆಗೆ ಕುತ್ತು ತಂದಿದ್ದಾರೆ. ಇದು ನೋವಿನ ಸಂಗತಿ ಎಂದರು.
ಟಿಎಂಸಿಯ ಡೆರೆಕ್ ಒ ಬ್ರೇನ್, ಆಪ್‌ನ ಸಂಜಯಸಿಂಗ್, ಕಾಂಗ್ರೆಸ್‌ನ ರಾಜೀವ್ ತರಾವ್, ಸಿಪಿಎಂನ ಕೆ.ಕೆ ರಾಗೇಶ್ ಅಮಾನತ್ತಾದ ಪ್ರಮುಖರು.ಕೆಲವರು ಸೆಕ್ರೆಟರಿ ಬೆಂಚ್ ಮೇಲೆ ಹತ್ತಿದ್ದರು, ಕೆಲವರು ಉಪ ಸಭಾಪತಿ ಮೈಕ್ ಕಿತ್ತುಕೊಳ್ಳಲು ಹೋದರು, ನಿಯಮ-ಆದೇಶ ಪ್ರತಿ ಹರಿದು ಹಾಕಿದರು ಎಂದು ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ಭಾನುವಾರ ಎರಡು ಕೃಷಿ ಮಸೂದೆಗಳನ್ನು ಧ್ವನಿಮತದ ಮೂಲಕ ಅಂಗೀಕರಿಸುವ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಈ ಘಟನೆ ನಡೆದಿತ್ತು.