ಬಿಯಸ್ಕೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಪೊಲೀಸ್ ಇಲಾಖೆಯಿಂದ ಸಿನಿಮಾ, ಸಿನಿಮಾದಿಂದ ರಾಜಕೀಯಕ್ಕೆ ಬಂದು, ರಾಜಕೀಯದಲ್ಲೂ ಜೆಡಿಎಸ್, ಕಾಂಗ್ರೆಸ್ ಇನ್ನಿಂಗ್ಸ್ ಮುಗಿಸಿ ಇದೀಗ ಬಿಜೆಪಿ ಸರಕಾರದಲ್ಲಿ ಕೃಷಿ ಸಚಿವರಾಗಿರುವ ಬಿ.ಸಿ. ಪಾಟೀಲ ಅಕ್ಷರಶಃ ಇಲಾಖೆಯ ನೌಕರರ ಪಾಲಿಗೆ “ಕೌರವ” ಎನಿಸಿದ್ದಾರೆ.
2020ರ ಜುಲೈ 1ರಂದು ಉಡುಪಿ ಜಿಲ್ಲೆಯ ಕೃಷಿ ಇಲಾಖೆಯ ವಿನೋದ್.ಆರ್.ಪಿ ಎಂಬುವವರು ನೇರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬರೆದ ಪತ್ರದ ಪ್ರತಿಗಳು ಇದೀಗ ವೈರಲ್ ಆಗಿದ್ದು, ಸಚಿವ ಬಿ.ಸಿ.ಪಾಟೀಲ್ ನಡೆ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟು ಹಾಕಿವೆ.
ಜೂನ್ 26, 2020ರ ಸರಕಾರದ ಆದೇಶದಲ್ಲಿ ಜುಲೈ10ರವರೆಗೆ ಇಲಾಖೆಯ ಗ್ರೂಪ್-ಬಿ, ಗ್ರೂಪ್-ಸಿ ಅಧಿಕಾರಿ/ನೌಕರರಿಗೆ ಅನ್ವಯವಾಗುವಂತೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖೆಯ ಸಚಿವರಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿತ್ತು.
ಈ ವಿಷಯದಲ್ಲಿ ಅಧಿಕಾರಿಗಳ, ನೌಕರರ ಹಿತ ಕಾಪಾಡಬೇಕಾದ ಕೃಷಿ ಸಚಿವ ಬಿ.ಸಿ.ಪಾಟೀಲ್, ತಮ್ಮ ಇಲಾಖೆಯ ನೌಕರರು ವರ್ಗಾವಣೆ ಬಯಸಿದರೂ ಸರಿ, ಇದ್ದ ಸ್ಥಳದಲ್ಲೇ ಮುಂದುವರಿಯಲು ಇಚ್ಛಿಸಿದರೂ ಸರಿ ಲಕ್ಷಾಂತರ ರೂಪಾಯಿ ಕಡ್ಡಾಯವಾಗಿ ನೀಡಬೇಕು ಎಂದು ಮೌಖಿಕವಾಗಿ ಆದೇಶಿಸಿದ್ದಾರೆ ಎಂಬ ಗಂಭೀರ ಆರೋಪ ಸ್ವತಃ ಕೃಷಿ ಇಲಾಖೆಯ ನೌಕರರೇ ಮಾಡಿದ್ದಾರೆ.
ನಾನು ಯಾವತ್ತೂ ಗಾಳಿಯಲ್ಲಿ ಗುಂಡು ಹೊಡೆಯಲ್ಲ. ಸತ್ಯವನ್ನೇ ಹೇಳ್ತಿನಿ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಪದೇ ಪದೇ ಜಿಲ್ಲೆಗೆ ಬರುವುದು ವಸೂಲಿ ಮಾಡಿ ಸೂಟ್‌ಕೇಸ್ ತುಂಬಿಸಿಕೊಂಡು ಹೋಗೋಕೆ ಅಂತ ಸುಮಾರು ಎರಡು ತಿಂಗಳ ಹಿಂದೆಯೇ ಹೇಳಿದ್ದೆ. ಈಗ ಆ ಸತ್ಯ ನೌಕರರಿಂದಲೇ ಹೊರ ಬಂದಿದಂತಾಗಿದೆ.
-ಶಿವರಾಜ ತಂಗಡಗಿ, ಮಾಜಿ ಸಚಿವ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಕೊಪ್ಪಳ.
ಕೃಷಿ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂಥ ಸನ್ನಿವೇಶ ಸೃಷ್ಟಿಯಾಗಿರುವುದು ಅಸಹ್ಯಕರ ಮತ್ತು ದುರದೃಷ್ಟಕರ. ಇಲಾಖೆಯ ಗ್ರೂಪ್ ಬಿ ಮತ್ತು ಸಿ ನೌಕರರಿಗೆ ಇರುವ ವೇತನವಾದರೂ ಎಷ್ಟು? ಹೊರಗಿನಿಂದ ಅವರಿಗೆ ಏನಾದರೂ ಆದಾಯ ಸಿಗುತ್ತದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ನೋ ರೆಸ್ಪಾನ್ಸ್
ಈ ಕುರಿತು ಪ್ರತಿಕ್ರಿಯೆ ಪಡೆಯಲು ಕೃಷಿ ಸಚಿವ ಬಿ.ಸಿ.ಪಾಟೀಲ ಅವರನ್ನು ಸಂಪರ್ಕಿಸಲು ಹಲವು ಸಲ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ.
ಕೃಷಿ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಕೃಷಿ ಸಚಿವರು ಈ ಕುರಿತು ಮಾತನಾಡಿರುವ ಸಾಕ್ಷ್ಯಗಳು ನಮ್ಮ ಬಳಿ ಇದ್ದು, ಮುಖ್ಯಮಂತ್ರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ವಾಸ್ತವವನ್ನು ಪರಿಶೀಲಿಸಲು ಕೋರಿರುವ ನೌಕರರು, ಆರೋಪ ಸಾಬೀತಾದರೆ ತಕ್ಷಣವೇ ಬಿ.ಸಿ.ಪಾಟೀಲ್ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟು, ಈ ಪ್ರಕರಣದಲ್ಲಿ ಭಾಗಿಯಾದ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ತಮಗಾಗುತ್ತಿರುವ ಅನ್ಯಾಯವನ್ನು ಒಂದು ವೇಳೆ ತಮ್ಮ ಹಂತದಲ್ಲಿ ಸರಿಪಡಿಸದಿದ್ದರೆ ಪ್ರಧಾನ ಮಂತ್ರಿ ಹಾಗೂ ಪಕ್ಷದ ಹೈಕಮಾಂಡ್ ಗಮನಕ್ಕೂ ವಿಷಯ ತರುವುದಾಗಿಯೂ, ಮತ್ತು ಇಲಾಖೆಯ ನೌಕರರು ಸಾಮೂಹಿಕ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆಯುವುದಾಗಿಯೂ ಅಳಲು ತೋಡಿಕೊಂಡಿದ್ದಾರೆ.
ಏಜೆಂಟರ ಮೂಲಕ ಎತ್ತುವಳಿ?
ಸಚಿವರು ನೌಕರರಿಂದ ವಂತಿಗೆ ವಸೂಲಿ ಮಾಡಲು ಕೆಲ ಏಜೆಂಟರನ್ನು ಕಳಿಸುತ್ತಾರೆ. ಯಾವುದೇ ಕೆಲಸಕ್ಕೆ ಬಾರದ ಏಜೆಂಟರು ಅಧಿಕಾರಗಳೊಂದಿಗೆ ದರ್ಪದಿಂದ ವರ್ತಿಸುತ್ತಾರೆ. ತಾವೇ ಸಚಿವರು ಎಂಬಂತೆ ದೌರ್ಜನ್ಯ ಮೆರೆಯುತ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ.