ವಿಜಯಸಾಕ್ಷಿ ಸುದ್ದಿ ನರಗುಂದ
2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತಾಲೂಕಿನಾದ್ಯಂತ ಜಿ.ಪಿ.ಎಸ್ ಆಧಾರಿತ ಬೆಳೆ ಸಮೀಕ್ಷೆಯನ್ನು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಅಂಗಡಿ ಗುರುವಾರ ತಾಲೂಕಿನ ರೈತರ ಜಮೀನುಗಳಿಗೆ ತೆರಳಿ ಕೈಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರ ಮೊಬೈಲ್ ಆಪ್ ಮತ್ತು ಖಾಸಗಿ ಪಿಆರ್‌ಒಗಳ ಮೊಬೈಲ್ ಆಪ್ ಮುಖಾಂತರ ನಡೆಸಿರುವ ಸಮೀಕ್ಷೆ ಮುಗಿಯುವ ಹಂತಕ್ಕೆ ಬಂದಿದೆ. ಕೃಷಿಗೆ ಸಂಬಂಧಿಸಿದ ಯಾವುದೇ ಸವಲತ್ತುಗಳನ್ನು ಪಡೆಯಲು ಬೆಳೆ ಸಮೀಕ್ಷೆ ಕಡ್ಡಾಯವಾಗಿರುತ್ತದೆ ಈ ಕುರಿತು ರೈತರಲ್ಲಿ ಅರಿವನ್ನು ಮೂಡಿಸಲಾಗಿದೆ ಎಂದರು.
ರೈತರು ತಮ್ಮ ಜಮೀನಿನ ಬೆಳೆಗಳ ಮಾಹಿತಿ, ಅಂಕಿ ಅಂಶಗಳನ್ನು ಸಮೀಕ್ಷೆಯಲ್ಲಿ ಸರಿಯಾಗಿ ನಮೂದಿಸಲಾಗಿದೆಯೇ? ಎಂಬುದನ್ನು ಪರಿಶೀಲಿಸಲು ಬೆಳೆದರ್ಶಕ 2020 ಆಪ್‌ನ್ನು ಬಿಡುಗಡೆ ಮಾಡಲಾಗಿದೆ. ರೈತ ಬಾಂಧವರು ಬೆಳೆ ವಿವರ, ವಿಸ್ತೀರ್ಣದ ಮಾಹಿತಿ, ಜಿ.ಪಿ.ಎಸ್, ಫೋಟೊ, ಸಮೀಕ್ಷೆ ಮಾಡಿದವರ ಹೆಸರು & ಮೊಬೈಲ್ ಸಂಖ್ಯೆ, ಮೇಲ್ವಿಚಾರಕರ ಅಂಗೀಕಾರ ಎಲ್ಲ ಮಾಹಿತಿಗಳನ್ನು ಪ್ರಸ್ತುತ ಆಪ್ ಮುಖಾಂತರ ಪಡೆಯಬಹುದಾಗಿದೆ.
ಒಂದು ವೇಳೆ ಬೆಳೆ ಸಮೀಕ್ಷೆ ವಿವರ ತಪ್ಪಾಗಿ ದಾಖಲಾಗಿದ್ದಲ್ಲಿ ತಕ್ಷಣವೇ ಆಪ್ ಮುಖಾಂತರ ಆಕ್ಷೇಪಣೆಗೆ ಸಲ್ಲಿಸಬಹುದು. ನಂತರ ಮೇಲ್ವಿಚಾರಕರು ರೈತರ ಆಕ್ಷೇಪಣೆಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸುತ್ತಾರೆ.
ರೈತರು ತಮ್ಮ ಆಕ್ಷೇಪಣೆ ಸಲ್ಲಿಸಲು ಅ.15 ಕೊನೆಯ ದಿನಾಂಕವಾಗಿದ್ದು, ಅದರ ನಂತರ ಆಕ್ಷೇಪಣೆ ಸಲ್ಲಿಸಲು ಪ್ರಸ್ತುತ ಆಪ್‌ನಲ್ಲ್ಲಿ ಅವಕಾಶವಿರುವುದಿಲ್ಲ ಎಂದು ಅವರು ಮಾಹಿತಿ ನೀಡಿದರು.
ಕೃಷಿ ಸವಲತ್ತುಗಳಿಗೆ ಬೆಳೆ ಸಮೀಕ್ಷೆ ಕಡ್ಡಾಯ: ಚನ್ನಪ್ಪ
Advertisement