ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯ ರೋಣ ಕೆಎಸ್‌ಆರ್ ಟಿಸಿ ಡಿಪೋದ ನೌಕರ ದಂಪತಿ ಮೇಲೆ ಇಬ್ಬರು ಆರೋಪಿಗಳು ಥಳಿಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಜೇಂದ್ರಗಡ ತಾಲ್ಲೂಕಿನ ಅಶೋಕ ಚನ್ನಬಸಪ್ಪ ಡುಮ್ಮನವರ ಹಾಗೂ ರೋಣ ತಾಲ್ಲೂಕಿನ ಮೆಣಸಿಗಿ ಗ್ರಾಮದ ಫಕೀರಗೌಡ ನಾಗನಗೌಡ ಹಿರೇಗೌಡ್ರ ಹಲ್ಲೆ ನಡೆಸಿರುವ ಆರೋಪಿಗಳಾಗಿದ್ದಾರೆ.
ರೋಣ ಕೆಎಸ್‌ಆರ್ ಟಿಸಿ ಡಿಪೋದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿದ್ದಪ್ಪ ಮಲಕಾಜಪ್ಪ ಪಟ್ಟಣಶೆಟ್ಟಿ ಹಾಗೂ ಅವರ ಪತ್ನಿ ನಿರ್ವಾಹಕಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸಿ ನಡೆಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ.
ರೋಣ-ನರೇಗಲ್ ಮಾರ್ಗದಲ್ಲಿ ಕರ್ತವ್ಯ ಮಾಡುತ್ತಿದ್ದ ವೇಳೆ, ರೋಣದಿಂದ ನರೇಗಲ್ ಪಟ್ಟಣಕ್ಕೆ ಬಂದಿದ್ದಾರೆ. ಸಂಜೆ ಬಸ್ ನಿಲ್ದಾಣದ ಕ್ಯಾಂಟಿನ್ ನಲ್ಲಿ ಚಹಾ ಕುಡಿಯುತ್ತಿದ್ದ ಸಂದರ್ಭದಲ್ಲಿ ಬಸ್ ಚಾಲಕ ಸಿದ್ದಪ್ಪನ ಮೇಲೆ ಅಶೋಕ ಹಾಗೂ ಫಕೀರಗೌಡ ಏಕಾಏಕಿ ಜಗಳಕ್ಕೆ ಮುಂದಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ, ಸಿದ್ದಪ್ಪನ ಹೆಂಡತಿಯಾಗಿರುವ ನಿರ್ವಾಹಕಿ ಮೇಲೋ ಆರೋಪಿಗಳು ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.