ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ:
ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತಗುಡ್ಡ ವನ್ಯಜೀವಿ ಧಾಮ ವ್ಯಾಪ್ತಿ 1 ಕಿ.ಮೀ. ಸುತ್ತಲಿನ 14 ಜಲ್ಲಿ ಕ್ರಷರ್ ಬಂದ್ ಮಾಡುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮಹತ್ವದ ಆದೇಶ ಹೊರಡಿಸಿದೆ.
ಶಿರಹಟ್ಟಿ ತಾಲೂಕು ವ್ಯಾಪ್ತಿಯಲ್ಲಿ ಬರುವ 14 ಜಲ್ಲಿ ಕ್ರಶರ್ ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಆಗಸ್ಟ್ 31ರಂದು ಕೇಂದ್ರ ಪರಿಸರ ಸಚಿವಾಲಯ, ಇಲ್ಲಿನ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಮೂಲಕ ಕ್ರಶರ್ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಮಾಡುತ್ತಿರುವವರ ಪೈಕಿ ಹಾಲಿ ಸಚಿವರು, ಮಾಜಿ ಸಚಿವರು, ಹಾಲಿ-ಮಾಜಿ ಶಾಸಕರು ಸಹ ಬೇನಾಮಿ ಹೆಸರಿನಡಿ ಗಣಿಗಾರಿಕೆ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಉದ್ಯಮಿಗಳು ಕೂಡ ಇದ್ದಾರೆ. ಕ್ವಾರಿಯಲ್ಲಿ ಶಕ್ತಿಶಾಲಿ ಜಿಲೆಟಿನ್ ಸ್ಫೋಟ ನಡೆಸಲಾಗುತ್ತಿದೆ. ಹೆಚ್ಚಾಗಿ ಪಾಸ್ ರಹಿತವಾಗಿ ಕಡಿಯನ್ನು ಟಿಪ್ಪರ ಮೂಲಕ ಸಾಗಿಸಲಾಗುತ್ತದೆ. ಈ ಉದ್ಯಮಿಗಳು ಸರ್ಕಾರಕ್ಕೆ ವಂಚಿಸಿರುವ ಪ್ರಕರಣದ ಹಿಂದೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.
ಕೇವಲ ಒಂದು ಕಿ.ಮೀ ವ್ಯಾಪ್ತಿಗೆ ಮಾತ್ರ ಸೀಮಿತನಾ.? ;
ಕಪ್ಪತಗುಡ್ಡವನ್ನು ಪರಿಸರ ಸೂಕ್ಷ್ಮ ವಲಯವನ್ನು ನಿಗದಿಪಡಿಸಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಪ್ರದೇಶದ ಗಡಿಯಿಂದ ಕನಿಷ್ಠ ೦.5 ಕಿ.ಮೀನಿಂದ ಗರಿಷ್ಠ 6 ಕಿ.ಮೀ ವ್ಯಾಪ್ತಿವರೆಗೆ ಕರಿಕಲ್ಲು ಗಣಿಗಾರಿಕೆ, ಕ್ವಾರಿ ಹಾಗೂ ಇನ್ನಿತರ ಯಾವುದೇ ಅಭಿವೃದ್ಧಿ ಚಟುವಟಿಕೆಗಳಿಗೆ ಅವಕಾಶ ಇಲ್ಲ ಎಂದು 2019 ರಲ್ಲಿ ಕೇಂದ್ರ ಸರ್ಕಾರ ಘೋಷಿಸಿದೆ. ನಿಯಮ ಹೀಗಿರುವಾಗ ಕಪ್ಪತ್ತಗುಡ್ಡ ವನ್ಯಜೀವಿಧಾಮದ 1 ಕಿ.ಮೀ. ವ್ಯಾಪ್ತಿಗೆ ಬರುವ ಕಲ್ಲಿನ ಕ್ವಾರಿ ಸ್ಥಗಿತಗೊಳಿಸಲು ಗಣಿ ಇಲಾಖೆ ನೋಟಿಷ್ ನೀಡಿದ್ದು, ಯಾವ ಪರುಷಾರ್ಥಕ್ಕೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಅಧಿಸೂಚನೆಯನ್ನು ಗಣಿ ಇಲಾಖೆ ಗಾಳಿಗೆ ತೂರಿದೆ ಎಂದು ಹಲವು ಪ್ರಗತಿಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫಲಿಸದ ಉದಾಸಿ ಪ್ರಯತ್ನ
ಕಪ್ಪತಗುಡ್ಡ ವನ್ಯಜೀವಿಧಾಮಯ ಬ್ಲಾಕ್ -೪ನ್ನು ವನ್ಯಜೀವಿಧಾಮ ಅಧಿಸೂಚನೆಯಿಂದ ಹೊರಗಿಡುವಂತೆ ಹಾವೇರಿ ಸಂಸದ ಶಿವಕುಮಾರ ಉದಾಸಿ ಅವರು ಕೇಂದ್ರ ಪರಿಸರ ಸಚಿವ ಪ್ರಕಾಶ ಜಾವಡೇಕರ್ ಅವರಿಗೆ ಪತ್ರ ಬರೆದಿದ್ದರು. ಶಿರಹಟ್ಟಿ ತಾಲೂಕಿನ 31ಜಲ್ಲಿ ಕ್ರಶರ್ ಉದ್ಯಮ ಉಳಿಸುವ ಸಂಬಂಧ ಸಂಸದರು ಕೇಂದ್ರ ಸಚಿವರ ಮೇಲೆ ಒತ್ತಡ ತರುವ ಪ್ರಯತ್ನ ಮಾಡಿದ್ದರು. ಅಲ್ಲದೇ ಗದಗ ಜಿಲ್ಲೆಗೆ ಯಾವುದೇ ರೀತಿಯಿಂದಲೂ ಸಂಬಂಧ ಇಲ್ಲದ ಹಾವೇರಿ ಜಿಲ್ಲೆ ಬ್ಯಾಡಗಿ ಕ್ಷೇತ್ರದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಬ್ಲಾಕ್ 3 ಮತ್ತು 4 ಎರಡನ್ನೂ ವನ್ಯಜೀವಿಧಾಮ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಸರಕಾರಕ್ಕೆ ಪತ್ರ ಬರೆದಿದ್ದರು. ಶಾಸಕ, ಸಂಸದರ ಪ್ರಯತ್ನದ ಹೊರತಾಗಿಯೂ ಬ್ಲಾಕ್ 4 ವ್ಯಾಪ್ತಿಯ 14 ಕ್ರಶರ್ ಸ್ಥಗಿತಕ್ಕೆ ಕೇಂದ್ರ ಪರಿಸರ ಸಚಿವಾಲಯ ಆದೇಶಿಸಿರುವುದು ಪರಿಸರವಾದಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ವಿಜಯಸಾಕ್ಷಿ ಎಚ್ಚರಿಸಿತ್ತು
ಕಪ್ಪತಗುಡ್ಡ ವನ್ಯಜೀವಿಧಾಮ ವ್ಯಾಪ್ತಿಯ ಬ್ಲಾಕ್ -4 ರಲ್ಲಿ ನಿಯಮ ಮೀರಿ ಕಲ್ಲು ಗಣಿಕಾರಿಗೆ ನಡೆಯುತ್ತಿದೆ. ಕಲ್ಲು ಗಣಿಗಾರಿಕೆ ರಕ್ಷಿಸುವ ಸಂಬಂಧ ಸಂಸದರು ಬ್ಲಾಕ್ -4 ನ್ನು ವನ್ಯಜೀವಿಧಾಮ ವ್ಯಾಪ್ತಿಯಿಂದ ಹೊರಗಿಡುವಂತೆ ಪತ್ರ ಬರೆದಿದ್ದು, ಶಿರಹಟ್ಟಿ ತಾಲೂಕಿನ 38 ಜಲ್ಲಿ ಕ್ರಶರ್ ಗಳು ಹಾಲಿ, ಮಾಜಿ ಜನಪ್ರತಿನಿಧಿಗಳ ಒಡೆತನದಲ್ಲಿರುವ ಕುರಿತು ಸರಣಿ ವರದಿ ಪ್ರಕಟಿಸಿ, ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಿತ್ತು.