ವಿಜಯಸಾಕ್ಷಿ ಸುದ್ದಿ, ಗದಗ:
ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಲು ಕಾಂಗ್ರೆಸ್ ಇನ್ನಿಲ್ಲದ ಕಾರ್ಯತಂತ್ರ ರೂಪಿಸುತ್ತಿದೆ. ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆಯಲ್ಲೂ ಗೆಲ್ಲಬಹುದಾದ ಪಕ್ಷದವರಲ್ಲದ ಆಕಾಂಕ್ಷಿಗಳಿಗೆ ‘ಕೈ ನಾಯಕರು ಮಣೆ ಹಾಕಿದ್ದು, ಪಕ್ಷಕ್ಕಾಗಿ ಕೆಲಸ ಮಾಡಿದ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎನ್ನಲಾಗಿದೆ.
ಅವಳಿ ನಗರದ ಪ್ರತಿ ವಾರ್ಡ್‌ಗಳಲ್ಲೂ ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್, ಬಿಜೆಪಿ ನಾಜೂಕಾಗಿ ನಡೆದುಕೊಂಡಿದೆ. ಉಭಯ ಪಕ್ಷಗಳು ಗೆಲ್ಲಬೇಕೆಂಬ ಒಂದೇ ಒಂದು ಮಾನದಂಡವಿಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಿವೆ. ಇದಕ್ಕಾಗಿ ಪಕ್ಷದವರಲ್ಲದಿದ್ದರೂ, ಅಂತಹವರಿಗೆ ಕೆಲ ವಾರ್ಡ್‌ನಲ್ಲಿ ಟಿಕೆಟ್ ನೀಡಿವೆ. ಇದು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಟಿಕೆಟ್ ಕೈ ತಪ್ಪಿದ್ದರಿಂದ ಆಕಾಂಕ್ಷಿಗಳು ತಮ್ಮ ಆಪ್ತರೆದುರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.
ಗದಗ-ಬೆಟಗೇರಿಯ ವಾರ್ಡ್ ನಂ.33 ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರವಾಗಿದ್ದು, ಕಾಂಗ್ರೆಸ್‌ನಿಂದ ರುದ್ರಮ್ಮಾ ಕೆರಕಲಮಟ್ಟಿ, ಜಯಶ್ರೀ ಪವಾರ, ಅನ್ನಪೂರ್ಣ ಮಾರುತಿ ಜೋಗದಂಡಕರ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದರು. ಟಿಕೆಟ್ ಗಿಟ್ಟಿಸಿಕೊಳ್ಳಲು ಹಲವು ನಾಯಕರ ಮನೆ ಬಾಗಿಲಿಗೆ ಹೋಗಿ ಮನವಿ ಮಾಡಿಕೊಂಡಿದ್ದರು.

ಅಲ್ಲದೇ, 33ನೇ ವಾರ್ಡ್ ವ್ಯಾಪ್ತಿಗೆ ಬರುವ ಬ್ಯಾಂಕರ್ಸ್ ಕಾಲನಿ ಹಿರಿಯರು ಈ ಮೂವರಲ್ಲಿ ಯಾರಿಗಾದರೊಬ್ಬರಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರು. ಆದರೆ, ಪಕ್ಷದ ನಾಯಕರು ಕಾಂಗ್ರೆಸ್‌ನಲ್ಲಿ ಪಕ್ಷದ ಈ ಮೂವರು ಪ್ರಬಲ ಆಕಾಂಕ್ಷಿಗಳನ್ನು ಬಿಟ್ಟು ಬಿಜೆಪಿ ಕಾರ್ಯಕರ್ತರಿಗೆ ಮಣೆ ಹಾಕಿದ್ದಾರೆ. ಇದರೊಂದಿಗೆ ಬ್ಯಾಂಕರ್ಸ್ ಕಾಲನಿ ಹಿರಿಯರ ಅಭಿಪ್ರಾಯವನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ ಎನ್ನಲಾಗಿದೆ.

ಹೌದು, 33ನೇ ವಾರ್ಡ್‌ನ ಬಿಜೆಪಿ ಟಿಕೆಟ್ ಕೇಳಿದ್ದ ಜ್ಯೋತಿ ಎಸ್.ಚಳಗೇರಿ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ. ಜ್ಯೋತಿ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದಕ್ಕಿಂತ ಮುಂಚೆ ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದರು. ಅಷ್ಟರಲ್ಲೇ ಕಾಂಗ್ರೆಸ್ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಚಳಿಗೇರಿ ಅವರ ಮನವೊಲಿಸಿ ಕಾಂಗ್ರೆಸ್ ಟಿಕೆಟ್ ಕೊಡಿಸಿದರು ಎಂದು ಮೂಲಗಳು ತಿಳಿಸಿವೆ.
ಕೊನೆಗಳಿಗೆಯಲ್ಲಿ ಬಿಜೆಪಿ ಅನಿತಾ ವಿಜಯಕುಮಾರ್ ಗಡ್ಡಿ ಅವರಿಗೆ ಟಿಕೆಟ್ ಕೊಟ್ಟು ನಿಟ್ಟುಸಿರು ಬಿಟ್ಟಿದೆ. ಇತ್ತ ಕಾಂಗ್ರೆಸ್ ಪಕ್ಷದವರೇ ಮೂವರು ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದರೂ, ಕೊನೆ ಕ್ಷಣದಲ್ಲಿ ಜ್ಯೋತಿ ಎಸ್.ಚಳಗೇರಿ ಅವರಿಗೆ ನೀಡಿರುವುದು ಆಶ್ಚರ್ಯ ಮೂಡಿಸಿದೆ. ಅಲ್ಲದೇ, ಕಾಂಗ್ರೆಸ್ ನಾಯಕರ ಇಂತಹದ್ದೊಂದು ತೀರ್ಮಾನ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ ಎನ್ನಲಾಗಿದೆ.