ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ದೇಶದಲ್ಲಿ ಮಹಾಮಾರಿ ಮಿತಿ ಮೀರಿ ತನ್ನ ಅಟ್ಟಹಾಸ ಪ್ರದರ್ಶಿಸುತ್ತಿದೆ. ಸಾಮಾನ್ಯ ಜನರ ಸೇವೆಗೆ ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ನಿಸ್ವಾರ್ಥ ಸೇವೆ ನೀಡುತ್ತಿರುವ ವೈದ್ಯರನ್ನೂ ಈ ಸೋಂಕು ಬಿಡುತ್ತಿಲ್ಲ. ಕಳೆದ ವರ್ಷ ಮಹಾಮಾರಿಗೆ ಬರೋಬ್ಬರಿ 800ಕ್ಕೂ ಅಧಿಕ ವೈದ್ಯರು ಬಲಿಯಾಗಿದ್ದರು.
ಸದ್ಯ ಎರಡನೇ ಅಲೆಯ ಭಯಾನಕತೆ ಶುರುವಾಗಿದ್ದು, ಏಪ್ರೀಲ್ ಹಾಗೂ ಮೇ ತಿಂಗಳ ವೇಳೆಗೆ ದೇಶದಲ್ಲಿ ಸುಮಾರು 269 ವೈದ್ಯರು ಈಗಾಗಲೇ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರಿಂದಾಗಿ ಹಲವು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಚಿಕಿತ್ಸೆಗೆ ತೊಂದರೆಯಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸೇವೆ ಮಾಡುತ್ತ ಪ್ರಾಣ ಬಿಟ್ಟ ವೈದ್ಯರ ಕುಟುಂಬಸ್ಥರು ಮಾತ್ರ ಕಣ್ಣೀರಿನಲ್ಲಿ ದಿನ ಕಳೆಯುತ್ತಿದ್ದಾರೆ.
ಎರಡನೇ ಅಲೆಯ ಏಪ್ರೀಲ್ ಹಾಗೂ ಮೇ ತಿಂಗಳಲ್ಲಿ ಆಂಧ್ರಪ್ರದೇಶದಲ್ಲಿ 22, ಆಸ್ಸಾಂ 3, ಬಿಹಾರ 78, ಛತ್ತೀಸಗಢ 3, ದೆಹಲಿ 28, ಗುಜರಾತ್ 2, ಗೋ 1, ಹರಿಯಾಣ 2, ಜಮ್ಮು ಮತ್ತು ಕಾಶ್ಮೀರ 3, ಕರ್ನಾಟಕ 8, ಕೇರಳ 2, ಮಧ್ಯಪ್ರದೇಶ 5, ಮಹಾರಾಷ್ಟ್ರ 14, ಓಡಿಶಾ 10, ಪುದುಚೇರಿ 1, ತಮಿಳುನಾಡು 11, ತೆಲಂಗಾಣ 19, ಉತ್ತರ ಪ್ರದೇಶ 37, ಉತ್ತರಖಾಂಡ 2, ಪಶ್ಚಿಮ ಬಂಗಾಳ 14 ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಇಬ್ಬರು ವೈದ್ಯರು ಸೇವೆ ಮಾಡುತ್ತ ಮಹಾಮಾರಿಗೆ ಬಲಿಯಾಗಿದ್ದಾರೆ.
ಬಿಹಾರ ರಾಜ್ಯದಲ್ಲಿಯೇ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗಿದ್ದಾರೆ. ಇನ್ನುಳಿದಂತೆ ಉತ್ತರ ಪ್ರದೇಶ, ದೆಹಲಿ, ಆಂಧ್ರಪ್ರದೇಶದಲ್ಲಿ ಹೆಚ್ಚಿನ ವೈದ್ಯರು ಬಲಿಯಾಗಿದ್ದಾರೆ. ಸರ್ಕಾರ ವೈದ್ಯರ ಆರೋಗ್ಯದ ಬಗ್ಗೆ ಇನ್ನಷ್ಟು ಕಾಳಜಿ ವಹಿಸಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.