HomeGadag Newsಕೇಸರೀಕರಣವಾಗುತ್ತಿದೆಯೇ ಗ್ರಾಮೀಣಾಭಿವೃದ್ಧಿ ವಿವಿ?

ಕೇಸರೀಕರಣವಾಗುತ್ತಿದೆಯೇ ಗ್ರಾಮೀಣಾಭಿವೃದ್ಧಿ ವಿವಿ?

For Dai;y Updates Join Our whatsapp Group

Spread the love

ಗ್ರಾವಿವಿ ಬಲಪಂಥೀಯ ವಿಚಾರಧಾರೆ ಹರಿವಿನ ಕೇಂದ್ರವೇ?

ಬಿ.ಎಲ್. ಸಂತೋಷ್ ಭಾಷಣದ ವೀಡಿಯೋ ಲಿಂಕ್ ಹಂಚಿಕೊಳ್ಳಲು ಮನವಿ

ಹಲವರ ಆಕ್ಷೇಪ: ವಿವಿಯ ಮುಖವಾಣಿಯಲ್ಲ ಎಂದ ಕುಲಪತಿ

ವಿಜಯಸಾಕ್ಷಿ ಸುದ್ದಿ, ಗದಗ

ನಗರದಲ್ಲಿರುವ ರಾಜ್ಯದ ಏಕೈಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ತನ್ನ ಮೂಲ‌‌ ಆಶಯಗಳನ್ನು ಬದಿಗೊತ್ತಿ, ಬಲಪಂಥೀಯ ವಿಚಾರಧಾರೆಗಳನ್ನು ಹರಿಬಿಡುವ ಕೇಂದ್ರವಾಗುತ್ತಿದೆಯೇ ಎನ್ನುವ ಪ್ರಶ್ನೆಯೀಗ ಎದ್ದಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ, ವಿವಿ ಹಾಗೂ ಮಾಧ್ಯಮ ಮಿತ್ರರ ಸಂವಹನಕ್ಕಾಗಿ ಇರುವ ವಾಟ್ಸ್ ಆಪ್ ಗ್ರೂಪ್‌ನಲ್ಲಿ ಆರೆಸ್ಸೆಸ್ ಪ್ರಮುಖ, ಬಿ.ಜೆ.ಪಿ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಕಾರ್ಯಕ್ರಮವೊಂದರ ಪೋಸ್ಟ್ ವೈರಲ್ ಮಾಡಲಾಗಿದೆ.

ಪ್ರಜ್ಞಾಪ್ರವಾಹ ಎನ್ನುವ ಫೇಸ್ ಬುಕ್ ಪೇಜ್‌ನ ಕರ್ನಾಟಕ ವಿಭಾಗದಿಂದ ಪ್ರಸಾರವಾಗಿರುವ ಬಿ.ಎಲ್. ಸಂತೋಷ್ ಅವರ ಭಾಷಣದ ಸಂಪೂರ್ಣ ವಿಡಿಯೋದ ಲಿಂಕ್ ಹಾಕಿಕ್ಕಲ್ಲದೆ, ಅದನ್ನು ಶೇರ್ ಮಾಡಿ ಎನ್ನುವ ಮನವಿಯನ್ನೂ ಮಾಡಲಾಗಿದೆ. ಈ ಮೂಲಕ ಬಲಪಂಥೀಯ ವಿಚಾರಧಾರೆಯನ್ನು ಪ್ರಸಾರ ಮಾಡಲಾಗುತ್ತಿದೆ ಎನ್ನುವ ಆರೋಪಗಳೀಗ ಕೇಳಿಬಂದಿವೆ.

ವಿಶ್ವವಿದ್ಯಾಲಯದ ಕಾರ್ಯಕ್ರಮ, ನೋಟಿಸ್, ಕುಂದು –ಕೊರತೆಯ ಸಂವಹನಗಳು ಈ ಗ್ರೂಪ್‌ನಲ್ಲಿ ನಡೆಯುತ್ತಿರುತ್ತವೆ. ಇಲ್ಲಿಯವರೆಗೆ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ವಿಷಯಗಳನ್ನು ಇಲ್ಲಿ ಚರ್ಚಿಸಲಾಗುತ್ತಿತ್ತು. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಎಲ್ಲ ಮಾಧ್ಯಮಗಳ ಪ್ರತಿನಿಧಿಗಳು, ವಿವಿಯ ಕುಲಪತಿಗಳು ಸಹ ಈ ಗ್ರೂಪ್‌ನಲ್ಲಿದ್ದಾರೆ.

ವಿಶ್ವವಿದ್ಯಾಲಯದ ವಿಚಾರಧಾರೆಗಳು ಜನರಿಗೆ ಮುಟ್ಟಲಿ ಎಂಬ ಕಾರಣಕ್ಕೆ ಇಲ್ಲಿ ವಿಶ್ವವಿದ್ಯಾಲಯದ ಸಿಬ್ಬಂದಿ ತಮ್ಮ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ, ಈ ಗ್ರೂಪ್‌ನಲ್ಲಿ ಕೋವಿಡ್ ಸಂದರ್ಭದಲ್ಲಿ ಆತ್ಮನಿರ್ಭರತೆ, ವಿಶ್ವ ಬಂಧುತ್ವ ಮತ್ತು ರಾಜಕಾರಣ ಎಂಬ ವಿಚಾರದ ಬಗ್ಗೆ ಪ್ರಜ್ಞಾ ಪ್ರವಾಹ ಕರ್ನಾಟಕ ವಿಭಾಗದ ವತಿಯಿಂದ ಫೇಸ್ಬುಕ್ ಲೈವ್‌ನಲ್ಲಿ ಆಯೋಜಿಸಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಮಾತನಾಡಿರುವ ವಿಷಯವನ್ನು ಹಂಚಿಕೊಳ್ಳಲಾಗಿದೆ.

ಮೊದಲು ಈ ವಿಷಯವನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆ, ಈ ಸುದ್ದಿಯನ್ನು ಬೇರೆ ಬೇರೆ ಗ್ರೂಪ್‌ಗಳಿಗೆ ಶೇರ್ ಮಾಡಿ ಎಂದು ಮನವಿ ಮಾಡಲಾಗಿತ್ತು. ಹಲವು ಮಾಧ್ಯಮ ಮಿತ್ರರು ಈ ಕುರಿತು ಪ್ರಶ್ನಿಸಿದಾಗ, ಶೇರ್ ಮಾಡದಂತೆ ಮನವಿ ಮಾಡಿಕೊಳ್ಳಲಾಯಿತು. ಆದರೆ ಆ ಲಿಂಕ್ ಅನ್ನು ಮಾತ್ರ ಗ್ರೂಪ್‌ನಿಂದ ತೆಗೆಯಲಿಲ್ಲ. ವಿಶ್ವವಿದ್ಯಾಲಯದ ಗ್ರೂಪ್‌ಗೂ ಬಿಜೆಪಿಯ ವಿಷಯಕ್ಕೂ ಏನು ಸಂಬಂಧ? ಈ ಗ್ರೂಪ್ ಅನ್ನು ಬಲಪಂಥೀಯ ವಿಚಾರಧಾರೆಗಳನ್ನು ಹಂಚಿಕೊಳ್ಳಲು ಬಳಸಲಾಗುತ್ತಿದೆಯೇ? ಎಂಬ ಪ್ರಶ್ನೆಗಳನ್ನು ಈಗ ಹಲವರು ಎತ್ತಿದ್ದಾರೆ.

ಭಾಷಣದಲ್ಲಿ ಏನಿದೆ?

ಬಿ.ಎಲ್. ಸಂತೋಷ್ ಅವರು, ರಾಜಕೀಯ‌ವನ್ನು ಲಾಬಿಯ ರೀತಿಯಲ್ಲಿ ನೋಡದೆ, ದಿವಾಳಿತನದ ಹಿನ್ನೆಲೆಯಲ್ಲಿ ನೋಡಬೇಕಿದೆ. ಸರ್ಕಾರದ ನಿರ್ಲಕ್ಷ್ಯ ಕೊರೊನಾ ಹರಡಲು ಕಾರಣ ಎಂಬ ಆರೋಪಗಳನ್ನು ವಿಪಕ್ಷ‌ಗಳು, ಬುದ್ಧಿಜೀವಿಗಳು ಮಾಡಿದರು. ಆದರೆ ಅದರಲ್ಲಿ ಹುರುಳಿಲ್ಲ. ಏಕೆಂದರೆ ಚುನಾವಣಾ ಸಮಾವೇಶ ಯಾವುದೇ ದೊಡ್ಡ ಕಾರ್ಯಕ್ರಮ ಇರದಿದ್ದರೂ ಮಹಾರಾಷ್ಟ್ರ‌ದ ಗ್ರಾಮೀಣ ಭಾಗಗಳಲ್ಲಿ ಸೋಂಕು ಏರಿಕೆಯಾಯಿತು. ನವದೆಹಲಿ, ಛತ್ತೀಸ್‌ಘಡಗಳಲ್ಲಿಯೂ ಯಾವುದೇ ದೊಡ್ಡ ಕಾರ್ಯಕ್ರಮ‌ಗಳಿರಲಿಲ್ಲ. ಆದರೂ ಅಲ್ಲೆಲ್ಲ ಸೋಂಕು ಹೆಚ್ಚಿತು. ಈ ವೈಜ್ಞಾನಿಕ ತರ್ಕದ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಸಮಾವೇಶ, ಕುಂಭಮೇಳ‌ದಿಂದ ಕೋವಿಡ್ ಹರಡಿತು ಎಂಬ ವಾದ ಹುರುಳಿಲ್ಲದ್ದು ಎಂಬುದಕ್ಕೆ ಇದು ಸಾಕ್ಷಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ ಧಾಟಿಯಲ್ಲಿರುವ, ಪ್ರಧಾನಿ ಮೋದಿ ಅವರ ತಪ್ಪು ನಿರ್ಧಾರಗಳಿಂದ ಕೊರೊನಾ ಬಂದಿಲ್ಲ. ಅದು ಹರಡಲು ಬಿಜೆಪಿ ಸರ್ಕಾರ ಕಾರಣವಲ್ಲ. ಬುದ್ಧಿಜೀವಿಗಳು ಹಾಗೂ ವಿರೋಧ ಪಕ್ಷಗಳ ನಾಯಕರು ಮೋದಿ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದ್ದಾರೆ ಎಂಬ ರೀತಿಯಲ್ಲಿ ಅವರು ವಿಡಿಯೋದಲ್ಲಿ ಚರ್ಚೆ ಮಾಡಿದ್ದಾರೆ.

ಈ ವಿಷಯವು ಗ್ರೂಪ್‌ನಲ್ಲಿ ಹರಿದಾಡಿದ್ದು, ಶೇರ್ ಮಾಡಲು ಕೂಡ ಮನವಿ ಮಾಡಲಾಗಿತ್ತು. ಹೀಗಾಗಿಯೇ ಈ ವಿಶ್ವವಿದ್ಯಾಲಯ ಬಲಪಂಥೀಯ ವಿಚಾರಧಾರೆಗಳನ್ನು ಪ್ರಚುರಪಡಿಸುತ್ತಿದೆಯೇ? ಎಂಬ ಅನುಮಾನ ಈಗ ಹಲವರನ್ನು ಕಾಡುತ್ತಿದೆ.

ಈ ವಿಷಯಕ್ಕೂ ವಿವಿಗೂ ಸಂಬಂಧವಿಲ್ಲ

ಈ ಗ್ರೂಪ್ ವಿಶ್ವವಿದ್ಯಾಲಯದ ಮುಖವಾಣಿಯಲ್ಲ. ಇದು ಪ್ರಶಾಂತ್ ಮೇರವಾಡೆಯವರು ಮಾಡಿರುವ ಗ್ರೂಪ್. ಸೋಷಿಯಲ್ ಮೀಡಿಯಾಗಳಲ್ಲಿ ಎಲ್ಲರೂ ಅವರವರ ಅಭಿಪ್ರಾಯಗಳನ್ನು ಹಂಚಿಕೊಳ್ತಾರೆ. ಹಾಗೆ ಅವರೂ ಹಂಚಿಕೊಂಡಿರಬಹುದು. ವಿವಿಗೆ ಇಂತಹ ಯಾವುದೇ ವಿಚಾರಗಳನ್ನು ವ್ಯಕ್ತಿಗತವಾಗಿ ಪ್ರಚಾರ ಮಾಡುವ ಉದ್ದೇಶವಿಲ್ಲ. ರಾಷ್ಟ್ರೀಯ ವಿಚಾರವಾದ ಆತ್ಮನಿರ್ಭರದ ವಿಷಯವನ್ನು ಗ್ರಾಮೀಣ ಹಾಗೂ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಪ್ರಚಾರ ಮಾಡುತ್ತೇವೆ. ಆದರೆ ಈ ವಿಷಯಕ್ಕೂ ವಿಶ್ವವಿದ್ಯಾಲಯಕ್ಕೂ ಸಂಬಂಧವಿಲ್ಲ.

  • ಪ್ರೊ| ವಿಷ್ಣುಕಾಂತ್ ಚಟಪಲ್ಲಿ, ಕುಲಪತಿಗಳು, ಗ್ರಾಮೀಣಾಭಿವೃದ್ಧಿ ವಿವಿ, ಗದಗ

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!